ಬೀದರ್ | ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ ಪ್ರಕರಣ : ನಾಲ್ವರ ಬಂಧನ

ಬೀದರ್ : ವ್ಯಕ್ತಿಯೊರ್ವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದ್ದಾರೆ.
ಇಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಯವರ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ ನಗರದ ಹೊರ ವಲಯದ ಅಲಿಯಾಬಾದ್ ರಿಂಗ್ ರಸ್ತೆಯಲ್ಲಿರುವ ಎಸ್ ಕೆ ಧಾಬಾದ ಹತ್ತಿರ ಹೊನ್ನಿಕೇರಿ ಗ್ರಾಮದ ವೈಜಿನಾಥ್ (50) ಎಂಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಸುಮಾರು 8 ಗಂಟೆ ಒಳಗಡೆ ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಮಾಡಲು ಹೇಳಿದ ಪ್ರಮುಖ ಆರೋಪಿಯೊಬ್ಬನು ಪರಾರಿಯಾಗಿದ್ದಾನೆ. ಆತನನ್ನು ತಕ್ಷಣವೇ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೊಲೆಯಾದ ವ್ಯಕ್ತಿಯು ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಶುಕ್ರವಾರ ಢಾಬಾದಲ್ಲಿ ಊಟಕ್ಕೆಂದು ಬಂದಿದ್ದರು. ಆ ಸಮಯದಲ್ಲಿ ನಾವದಗೇರಿಯ ಜಾನ್ ಹಾಗೂ ಕುಂಬಾರವಾಡಾದ ನಿವಾಸಿ ಉಮೇಶ್ ಸೇರಿ ಈ ಕೃತ್ಯ ಎಸಗಿದ್ದಾರೆ. ಆ ಇಬ್ಬರು ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಕೊಲೆ ಮಾಡಿಸಿದ ವ್ಯಕ್ತಿಯನ್ನು ಬಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ.