ಬೀದರ್ | ಹಿರಿಯರು ಕಿವಿಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು : ಡಾ.ವಿ.ವಿ.ನಾಗರಾಜ್

ಬೀದರ್ : ಹಿರಿಯ ನಾಗರಿಕರು ಕಿವಿಗಳ ಸಮಸ್ಯೆಯನ್ನು ನಿರ್ಲಕ್ಷ ಮಾಡಬಾರದು ಎಂದು ಇ ಎನ್ ಟಿ ಸರ್ಜನ್ ಡಾ.ವಿ.ವಿ.ನಾಗರಾಜ್ ಅವರು ತಿಳಿಸಿದ್ದಾರೆ.
ಇಂದು ನಗರದ ಗುರುನಾನಕ್ ಕಾಲೋನಿಯಲ್ಲಿರುವ ವೈಷ್ಣವಿ ಕನ್ವೆನ್ಷನ್ ಹಾಲನಲ್ಲಿ ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯಿಂದ ಆಯೋಜಿಸಲಾದ ಹಿರಿಯ ನಾಗರಿಕರಿಗೆ ಆರೋಗ್ಯದ ಅರಿವು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ನಾಗರಿಕರಿಗೆ ಕಿವಿಯಲ್ಲಿ ತನ್ನ ತಾನಾಗಿಯೇ ಶಬ್ದ ಬರುತ್ತಿದ್ದರೆ, ಮಂದವಾಗಿ ಕೇಳಿಸುತ್ತಿದ್ದರೆ, ತಪಾಸಣೆ ಮಾಡಿಸಿಕೊಳ್ಳಬೇಕು. ತಲೆ ಸುತ್ತುತ್ತಿದ್ದರೆ ಕಿವಿಯಲ್ಲಿ ಸಮಸ್ಯೆಯಾಗಿರುತ್ತದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ಯಾವುದಕ್ಕೂ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಲಘು ವ್ಯಾಯಾಮ, ಬಿಸಿ ಹಾಗೂ ಮೆತ್ತನೆಯ ಆಹಾರ ಸೇವನೆ ಮಾಡಬೇಕು. ರಕ್ತದೋತ್ತಡ, ಶುಗರ್ ನಿರಂತರ ಚೆಕ್ ಮಾಡಿಸಿಕೊಳ್ಳಬೇಕು. ರಾತ್ರಿ ಬೇಗನೆ ಊಟ ಮಾಡಿ, ಬೇಗನೆ ಮಲಗಬೇಕು ಎಂದು ಅವರು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ಅವರು ಮಾತನಾಡಿ, ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯು ಸರ್ಕಾರದಿಂದ ಅಥವಾ ಸಂಘ ಸಂಸ್ಥೆಗಳಿಂದ ಯಾವುದೇ ಸಹಾಯದ ಫಲಾಪೇಕ್ಷೆ ಇಲ್ಲದೇ ಕಳೆದ 8 ವರ್ಷಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಅರಿವು, ಪರಿಸರ ಜಾಗೃತಿ, ಕಲೆ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ, ಸ್ಥಳೀಯ ಕುಂದು ಕೊರತೆಗಳನ್ನು ಸರಿಪಡಿಸುವುದು, ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಬರುತ್ತಿದೆ. ಇದನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ನಾಯಕ ನಟ ಮನೋಜ್ ಕುಮಾರ್ ಅವರಿಗೆ ಎರಡು ನಿಮಿಷ ಮೌನಾಚಾರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮನೋಜ್ ಕುಮಾರ್ ಅವರ ಚಿತ್ರದ ಸೂಪರ್ ಹಿಟ್ ಹಾಡುಗಳನ್ನು ಅಬೆದ್ ಅಲಿ, ಡಾ.ವಿ.ವಿ̤ನಾಗರಾಜ್ ಹಾಗೂ ಉಪ್ಪಿನ ರವರು ಹಾಡಿದರು.
ಈ ಸಂದರ್ಭದಲ್ಲಿ ಅರವಿಂದ್ ಕುಲಕರ್ಣಿ, ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ, ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲ್, ರಮಾ ಕುಲಕರ್ಣಿ, ನಿರ್ದೇಶಕ ರಾಜೇಂದ್ರ ಸಿಂಗ ಪವಾರ್, ಕೋಶಾಧ್ಯಕ್ಷ ಗಂಗಪ್ಪ ಸಾವಳೆ, ಕೆ.ವಿ. ಪಾಟೀಲ್, ಎಂ.ಎನ್.ಕುಲಕರ್ಣಿ, ಮಚೇಂದ್ರನಾಥ್, ಬಸವರಾಜ್ ಘುಲೆ, ಅನುರಾಮ್ ಕುಲಕರ್ಣಿ, ಮಹಾಲಿಂಗಪ್ಪ ಬೆಲ್ದಾಳೆ, ಮಲ್ಲಿಕಾರ್ಜುನ್ ಪಾಟೀಲ್, ಶಂಕರ್ ಚಿದ್ರಿ, ವಿಜಯ್ ಆತನೂರ್, ರತೀನ್ ಕಮಲ್, ರಾಮಚಂದ್ರ ಗಜರೆ, ಸಿಮ್ರಾನ್, ಸೋಮೇಶ್ ಹಾಗೂ ರೇಖಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.