ಹಸಿರು ಕ್ರಾಂತಿಯಿಂದ ಜನತೆಯ ಹಸಿವು ನೀಗಿಸಿದ ಶ್ರೇಷ್ಠ ನಾಯಕ ಡಾ.ಬಾಬು ಜಗಜೀವನ ರಾಮ್ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಮೂಲಕ ದೇಶದ ಜನತೆಯ ಹಸಿವು ನೀಗಿಸಿದ್ದಾರೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಇಂದು ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ನಾಯಕರಾದ ಡಾ.ಬಾಬು ಜಗಜೀವನರಾಮ್ ಅವರು ಶೋಷಿತ ವರ್ಗದ ಮತ್ತು ಕಾರ್ಮಿಕರ ಧ್ವನಿಯಾಗಿ, ದಕ್ಷ ಆಡಳಿತಗಾರರಾಗಿ, ಸ್ವಾತಂತ್ರ‍್ಯ ಹೋರಾಟಗಾರಾಗಿ, ಸಮಾಜ ಸುಧಾರಕರಾಗಿ, ಅಸ್ಪೃಶ್ಯತೆ, ಅಸಮಾನತೆ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದರು. ದೇಶದಲ್ಲಿ ಬರಗಾಲ ಬಂದಾಗ ಜನರು ಹಸಿವಿನಿಂದ ನರಳುತ್ತಿರುವ ಸಮಯದಲ್ಲಿ ಹಸಿರು ಕ್ರಾಂತಿಯ ಮೂಲಕ ದೇಶದ ಜನರು ಎದುರಿಸುತ್ತಿರುವ ಆಹಾರ ಸಮಸ್ಯೆಯನ್ನು ಬಗೆಹರಿಸಿದರು ಎಂದು ಅವರು ತಿಳಿಸಿದರು.
ಜಗಜೀವನ್ ರಾಮ್ ಅವರು ಕೇಂದ್ರ ಆಹಾರ, ಕೃಷಿ ಮತ್ತು ರಕ್ಷಣಾ ಸಚಿವರಾಗಿ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. 1971 ರಲ್ಲಿ ಇಂದಿರಾ ಗಾಂಧಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದಾಗ ಪಾಕಿಸ್ತಾನದ ಮೇಲೆ ಯುದ್ದ ಮಾಡಿ ಬಾಂಗ್ಲಾದೇಶದ ಸೃಷ್ಟಿಗೆ ಕಾರಣರಾದರು. ಅವರು ತೋರಿರುವ ಮಾರ್ಗದಲ್ಲಿ ನಾವೇಲ್ಲರೂ ಸಾಗಬೇಕು. ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಅವರು ನುಡಿದರು.
ಹಾಗೆಯೇ ನಗರದ ಚಿಕ್ಕಪೇಟನ ಸರ್ವೆ ನಂ. 61 ರಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಭವನದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಡಾ.ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ವಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ರಘು ಎಚ್.ಎಸ್ ಹಾಗೂ ಸಮಾಜದ ಮುಖಂಡರಾದ ಚಂದ್ರಕಾಂತ್ ಹಿಪ್ಪಳಗಾಂವ್, ರಾಜು ಕಡ್ಯಾಳ್, ಫರ್ನಾಂಡಿಸ್ ಹಿಪ್ಪಳಗಾಂವ್, ಶಾಮಣ್ಣ ಬಂಬಳಗಿ, ವಿಜಯಕುಮಾರ್ ಸೊನಾರೆ, ರೋಹಿದಾಸ್ ಘೋಡೆ ಮತ್ತು ಪೀಟರ್ ಚಿಟಗುಪ್ಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.