ಬೀದರ್ | ಲಂಚ ಬೇಡಿಕೆ ಆರೋಪ : ಸಿಂದೋಲ್ ಗ್ರಾಮ ಪಂಚಾಯತ್ ಪಿಡಿಓ ಅವರನ್ನು ಅಮಾನತುಗೊಳಿಸಲು ಮನವಿ

Update: 2025-04-04 17:28 IST
Photo of Letter of appeal
  • whatsapp icon

ಬೀದರ್ : ಸಿಂದೋಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ರೆಡ್ಡಿ ಅವರನ್ನು ಅಮಾನತುಗೊಳಿಸಬೇಕು ಎಂದು ಅಂಬೇಡ್ಕರ್ ಸೇನೆಯು ಒತ್ತಾಯಿಸಿದೆ.

ಇಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡೇವಿಡ್ ಸೋನೆ ಅವರು ಸಿಂದೋಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ರೆಡ್ಡಿ ಅವರಿಗೆ ಶೌಚಾಲಯಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಾಗ ಅವರು 5,000 ರೂ. ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಂದೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಡಪಳ್ಳಿ ಗ್ರಾಮದ ನಿವಾಸಿಯಾದ ಬಸಮ್ಮಾ ಗಂಡ ಹಣಮಂತ ಇವರಿಗೆ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿರುತ್ತದೆ. ಖಾಲಿ ನಿವೇಶನದ ಜಿಪಿಎಸ್ ಮಾಡಿಕೊಡುವಂತೆ ಮನವಿ ಮಾಡಿಕೊಂಡಾಗ ಪಿಡಿಓ ಅವರು 10,000 ರೂ. ಬೇಡಿಕೆ ಇಟ್ಟಿರುತ್ತಾರೆ. ಹೀಗೆ ಬೇರೆ ಯಾರಾದರೂ ತಮ್ಮ ಕೆಲಸಕ್ಕೆಂದು ಹೋದಾಗ ಪ್ರತಿಯೊಬ್ಬರಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದ್ದಾರೆ.

ಪಿಡಿಓ ಅವರು ಕೆಲಸ ಮಾಡದೇ ಸರ್ಕಾರದ 15ನೇ ಹಣಕಾಸು ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗೆಯೇ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡದೆ, ಜೆಸಿಬಿಯಿಂದ ಕೆಲಸ ಮಾಡಿ, ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಕೆಲ ಕೂಲಿ ಕಾರ್ಮಿಕರನ್ನು ನಿಲ್ಲಿಸಿ ಭಾವಚಿತ್ರ ತೆಗೆದುಕೊಂಡು ಕಾರ್ಮಿಕರ ಖಾತೆಗೆ ಹಣ ಜಮೆ ಮಾಡುವ ಮೂಲಕ ಅವರಿಂದ ಹಣ ಹಿಂಪಡೆಯುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡು ಪಂಚಾಯತ್‌ ಗೆ ಹೋದಾಗ ಪಂಚಾಯತ್‌ನಲ್ಲಿ ನಿಮ್ಮ ಒಂದೇ ಊರಿಲ್ಲ. ಇದರಲ್ಲಿ 6 ಗ್ರಾಮಗಳು ಬರುತ್ತವೆ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು ಕಚೇರಿಯಿಂದ ಓಡಿಸುತ್ತಿದ್ದಾರೆ. ಆದ್ದರಿಂದ ಪಿಡಿಓ ಅವರನ್ನು ಕೂಡಲೇ ಅಮಾನತು ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಹೆಗ್ಡೆ, ಉಪಾಧ್ಯಕ್ಷ ರಾಜಕುಮಾರ್ ಹಳ್ಳಿಖೇಡಕರ್, ಪ್ರಧಾನ ಕಾರ್ಯದರ್ಶಿ ಶಿವರಾಜ್ ದೊಡ್ಡಿ, ಸಂಘಟನಾ ಕಾರ್ಯದರ್ಶಿ ಡೇವಿಡ್ ಸೋನೆ, ರಾಜಕುಮಾರ್ ಭಟಾರೆ, ಪ್ರಮೋದ್ ಸಿಂಧೆ, ಮಹೇಶ ಚಿಟ್ಟೆ, ವಿಶಾಲ್, ಅಬ್ರಾಹಂ ಸೋನೆ ಹಾಗೂ ಕಪೀಲ ಕಾಂಬಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News