ವಸತಿ ರಹಿತರ ಆ್ಯಪ್ ಸರ್ವೆ ಕಾರ್ಯ ಪ್ರಾರಂಭ, ಬೀದರ್ ಜಿಲ್ಲೆಗೆ ಮೊದಲ ರ‍್ಯಾಂಕ್ : ಸಂಸದ ಸಾಗರ್ ಖಂಡ್ರೆ

Update: 2025-04-08 21:26 IST
ವಸತಿ ರಹಿತರ ಆ್ಯಪ್ ಸರ್ವೆ ಕಾರ್ಯ ಪ್ರಾರಂಭ, ಬೀದರ್ ಜಿಲ್ಲೆಗೆ ಮೊದಲ ರ‍್ಯಾಂಕ್ : ಸಂಸದ ಸಾಗರ್ ಖಂಡ್ರೆ
  • whatsapp icon

ಬೀದರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸರ್ವರಿಗೂ ಸೂರು ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ನಿವೇಶನ ರಹಿತ, ವಸತಿ ರಹಿತ ಕುಟುಂಬಗಳ ಸರ್ವೇ ಕಾರ್ಯ ಆರಂಭಗೊಂಡಿದೆ. ರಾಜೀವ್ ಗಾಂಧಿ ವಸತಿ ನಿಗಮದ ಎ.8 ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಬೀದರ್ ಜಿಲ್ಲೆಯು 43,700 ಕುಟುಂಬಗಳ ಸರ್ವೇಗೊಳಪಟ್ಟು ಮೊದಲ ರ‍್ಯಾಂಕ್ ಪಡೆದಿದೆ ಎಂದು ಲೋಕಸಭಾ ಸಂಸದ ಸಾಗರ್ ಖಂಡ್ರೆ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 40,546 ಮನೆ ಹಂಚಕೆ ಗುರಿ ನೀಡಲಾಗಿದೆ. ಈ ಪೈಕಿ 14,627 ಮನೆ ಮಂಜೂರಾತಿ ಪಡೆಯಲಾಗಿದ್ದು, ರಾಜ್ಯದಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಆ್ಯಪ್ ಮೂಲಕ ಸರ್ವೆ ಕೈಗೆತ್ತಿಕೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದಿದ್ದಾರೆ.

ಸ್ವಯಂ ಸಮೀಕ್ಷೆ : ಜಿಲ್ಲೆಯಲ್ಲಿ 10,471 ಕುಟುಂಬಗಳು ಸ್ವಯಂ ಸಮೀಕ್ಷೆ ಮಾಡಿದರೆ, 33,229 ಗ್ರಾಮ ಪಂಚಾಯತ್ ಸಿಬ್ಬಂದಿಯ ಸಹಕಾರದಿಂದ ಸಮೀಕ್ಷೆ ನಡೆದಿದೆ. ಇನ್ನೂ ಬಾಕಿ ಉಳಿದ ವಸತಿ ರಹಿತರು ಹಾಗೂ ನಿವೇಶನ ರಹಿತರು ಸಂಬಂಧಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ ವಸತಿ ರಹಿತರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದು. ವಸತಿ ರಹಿತರು, ನಿವೇಶನ ರಹಿತರು ತಾವೇ ಖುದ್ದಾಗಿ ಮೊಬೈಲ್ ಆಪ್ ಮೂಲಕ ನೋಂದಣಿ ಕೂಡ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಐದು ವರ್ಷಕೊಮ್ಮೆ ರಾಜೀವ ಗಾಂಧಿ ವಸತಿ ನಿಗಮವು ವಸತಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, 2017-18ರ ಬಳಿಕ ಈಗ ಮತ್ತೊಂದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ 30 ರವರೆಗೆ ನಿವೇಶನ ರಹಿತ, ವಸತಿ ರಹಿತ ಕುಟುಂಬಸ್ಥರು ಸರ್ವೇದಲ್ಲಿ ಪಾಲ್ಗೊಂಡು ಸೂರು ಪಡೆದುಕೊಳ್ಳಲು ಸುವರ್ಣಾವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಯಾರು ಅರ್ಹರು : ವಸತಿ ರಹಿತರು, ನಿವೇಶನ ರಹಿತರು, ಕಚ್ಚಾ ಮನೆ ಹೊಂದಿರುವವರು, ಕುಟುಂಬ ವಾರ್ಷಿಕ ಆದಾಯ 1.80 ಲಕ್ಷಕ್ಕಿಂತ ಮೀರಿರಬಾರದು, ಆಯಾ ಜಿಲ್ಲಾ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ವಸತಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಪಂಚಾಯತಿ ಮಟ್ಟದಲ್ಲಿ ಬಿಲ್ ಕಲೆಕ್ಟರ್, ಗ್ರೇಡ್-1 ಕಾರ್ಯದರ್ಶಿ ಮತ್ತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳನ್ನು ಸರ್ವೇಕ್ಷಕರೆಂದು ನಿಯೋಜಿಸಲಾಗಿದೆ. ಅದಲ್ಲದೆ ನಿವೇಶನ ರಹಿತ ಮತ್ತು ವಸತಿ ರಹಿತರಾಗಿದ್ದವರು ಸ್ವಯಂ ಸಮೀಕ್ಷೆಯೂ ನಡೆಸಬಹುದು. ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಫಲಾನುಭವಿಗಳಾಗಿದ್ದರೆ ಸುಸಜ್ಜಿತ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ಅನುದಾನ ನೀಡಿದರೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಫಲಾನುಭವಿಗಳಿಗೆ 1.75 ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News