ದೇಹದಲ್ಲಿ ಹರಿಯುವ ರಕ್ತ, ಉಸಿರಾಡುವ ಗಾಳಿ ಒಂದೇ ಇರುವಾಗ ಭೇದ ಭಾವ ಇರಬಾರದು : ಸಚಿವ ರಹೀಮ್ ಖಾನ್

ಬೀದರ್ : ದೇಹದಲ್ಲಿ ಹರಿಯುವ ರಕ್ತ, ಉಸಿರಾಡುವ ಗಾಳಿ ಒಂದೇ ಇರುವಾಗ ಭೇದ ಭಾವ ಇರಬಾರದು. ಮನುಷ್ಯರೆಲ್ಲರೂ ಭೇದ ಭಾವ ಬಿಟ್ಟು ಒಂದಾಗಿ ಬಾಳಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಹೇಳಿದರು.
ರವಿವಾರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ಅವರ ಸಂಯುಕ್ತಾಶ್ರಯದಲ್ಲಿ ರಮಝಾನ್ ಪ್ರಯುಕ್ತ ಆಯೋಜಿಸಿದ್ದ ʼಈದ್ ಸ್ನೇಹಕೂಟʼದಲ್ಲಿ ಮಾತನಾಡಿದ ಅವರು, ಮುಸಲ್ಮಾನರು ವೈಯಕ್ತಿಕ, ಸಮುದಾಯದ ಸುಧಾರಣೆ ಜತೆಗೆ ಇತರರ ಸುಧಾರಣೆಗೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ಕಾಮಗಾರಿಗಳ ಉದ್ಘಾಟನೆಗೆ ಎ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲೆಯಿಂದ ನಾಗರಿಕ ವಿಮಾನಯಾನ ಸೇವೆಯೂ ಶೀಘ್ರ ಪುನರ್ ಆರಂಭವಾಗಲಿದೆ ಎಂದು ಅಭಿವೃದ್ಧಿಯ ಸಂಕ್ಷಿಪ್ತ ಮಾಹಿತಿ ನೀಡಿದರು.
ಮಂಗಳೂರಿನ ಇಸ್ಹಾಕ್ ಪುತ್ತೂರ್ ಅವರು ಮಾತನಾಡಿ, ಸಂತೋಷ ಹಾಗೂ ಪ್ರೀತಿ ಪರಸ್ಪರ ಹಂಚಿಕೊಳ್ಳುವುದರಿಂದ ವೃದ್ಧಿಯಾಗುತ್ತದೆ. ಇದರಿಂದ ಸಮೃದ್ಧ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಮೌಲ್ವಿ ಮಹಮ್ಮದ್ ಫಹೀಮುದ್ದೀನ್ ಮಾತನಾಡಿ, ಭೂಮಿಯಲ್ಲಿ ಮನುಷ್ಯನಿಗೆ ಮಹತ್ವದ ಸ್ಥಾನವಿದೆ. ಅದನ್ನು ತಿಳಿದು ಉತ್ತಮ ವ್ಯಕ್ತಿಯಾಗಿ ಬದುಕಬೇಕು. ಒಳಿತು ಮಾಡುತ್ತ, ಕೆಡಕನ್ನು ತ್ಯಜಿಸಬೇಕು. ಮನುಷ್ಯರು ಬೇರೆಯವರಿಗೆ ಸಿಹಿ ನೀಡಬೇಕೇ ಹೊರತು ವಿಷವನ್ನಲ್ಲ ಎಂದು ಹೇಳಿದರು.
ಬ್ರಹ್ಮಕುಮಾರಿ ಆಶ್ರಮದ ಜ್ಯೋತಿ ಬಹೆನ್ ಜಿ. ಅವರು ಮಾತನಾಡಿ, ಈ ಜಗತ್ತು ಪ್ರವಾಸಿ ತಾಣವೆಂದು ತಿಳಿದು, ನಾವೆಲ್ಲ ಪ್ರವಾಸಿಗರಂತೆ ಜೀವನ ಸಾಗಿಸಬೇಕು. ಆತ್ಮಶಾಂತಿಗಾಗಿ ದೇವರ ಸ್ಮರಣೆ ಮಾಡಬೇಕು ಎಂದರು.
ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಮಾತನಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಮಹಮ್ಮದ್ ಮೋನಿಶ್ ಕಿರ್ಮಾನ್, ಸರ್ದಾರ್ ಗ್ಯಾನಿ ದರ್ಬಾರಸಿಂಗ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ್ ಅತಿವಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಬಿರಾದಾರ್, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ್ ಧನ್ನೂರ್, ಪ್ರಮುಖರಾದ ಮಡಿವಾಳಪ್ಪ ಗಂಗಶೆಟ್ಟಿ, ಮಂಗಲಾ ಭಾಗವತ್, ಇಕ್ಬಾಲ್ ಗಾಜಿ, ತೌಹೀದ್ ಶಿಂಧೆ, ಸಂಜೀವ್ ಸೂರ್ಯವಂಶಿ, ಗುರುನಾಥ್ ಗಡ್ಡೆ, ಮಹಮ್ಮದ್ ಆಸಿಫೊದ್ದೀನ್ ಹಾಗೂ ಎಂ.ಎಸ್. ಮನೋಹರ್ ಉಪಸ್ಥಿತರಿದ್ದರು.
