ಬೀದರ್ | ಅರ್ಷದ್ ಅಲಿ ಅವರ ಸಾತ್ವಿಕತೆ ಯುವ ಪತ್ರಕರ್ತರಿಗೆ ಉಸಿರಾಗಲಿ : ಶಿವಶರಣಪ್ಪ ವಾಲಿ

ಬೀದರ್ : ದಿ.ಕಾಜಿ ಅರ್ಷದ್ ಅಲಿಯವರ ಸ್ವಾಭಿಮಾನ ಹಾಗೂ ಸಾತ್ವಿಕ ಗುಣಗಳು ಇಂದಿನ ಯುವ ಪತ್ರಕರ್ತರಿಗೆ ಉಸಿರಾಗಲಿ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷರೂ ಆಗಿದ್ದ ದಿ.ಕಾಜಿ ಅರ್ಷದ್ ಅಲಿ ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರಾದವರು ಅಧಿಕಾರಿಗಳೊಂದಿಗೆ ಸ್ನೇಹತ್ವ ಬೆಳೆಸಬೇಕೇ ವಿನಃ ಗುಲಾಮಗಿರಿ ಮಾಡಕೂಡದು. ನಮ್ಮ ವೃತ್ತಿಧರ್ಮ ಪ್ರಾಮಾಣಿಕತೆಯಿಂದ ಪಾಲಿಸಬೇಕು. ನಾವು ಇನ್ನೊಬ್ಬರಿಗೆ ಹೆದರಿಸುವ ಅಥವಾ ಬ್ಲ್ಯಾಕ್ ಮೇಲ್ ಮಾಡುವ ಪತ್ರಕರ್ತರಾಗದೆ ನಮ್ಮ ಬರವಣಿಗೆಗೆ ಜಾಗೃತಿ ಮೂಡಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ ಅವರು ಮಾತನಾಡಿ, ಜ್ಞಾನದ ಹಾಗೂ ಧೈರ್ಯದ ಕೊರತೆಯಿಂದ ಇಂದು ಶ್ರೇಷ್ಠ ವರದಿಗಾರಿಕೆ ವಿಮುಖವಾಗುತ್ತಿದೆ. ಹೆಚ್ಚು ಅಧ್ಯಯನಶೀಲರಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಗಂಧರ್ವ ಸೇನಾ ಅವರು ಮಾತನಾಡಿ, ಅರ್ಷದ ಅಲಿ ಅವರು ಒಂದು ವಿಶ್ವಕೋಶದಂತೆ ಇದ್ದರು. ಪರಿಪೂರ್ಣ ಅಧ್ಯಯನಗೈದು ಪ್ರಖರ ಸುದ್ದಿ ಬಿತ್ತರಿಸುವ ಅವರ ಕೌಶಲ್ಯ ಇಂದಿನ ಉದಯೋನ್ಮುಖ ಪತ್ರಕರ್ತರಿಗೆ ದಾರಿದೀಪವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಬಾಬು ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ವಾರ್ತಾ ಇಲಾಖೆಯ ವಿಜಯಕೃಷ್ಣ ಸೋಲಪುರ್, ಅರ್ಷದ ಅಲಿ ಅವರ ಕುಟುಂಬಸ್ಥ ಕಾಜಿ ಅಲಿಯೋದ್ದಿನ್, ಐ.ಎಫ್.ಡಬ್ಲೂ.ಜೆ ಸದಸ್ಯ ಅಪ್ಪಾರಾವ್ ಸೌದಿ, ಶಶಿಕುಮಾರ್ ಪಾಟೀಲ್,ಪತ್ರಕರ್ತರಾದ ದೀಪಕ್ ವಾಲಿ, ಚಂದ್ರಕಾಂತ್ ಪಾಟೀಲ್, ಶ್ರೀನಿವಾಸ್ ಚೌಧರಿ, ಪೃಥ್ವಿರಾಜ್ ಎಸ್., ನಾಗಶೆಟ್ಟಿ ಧರಂಪುರ್, ಅಬ್ದುಲ್ ಖದಿರ್, ಶಶಿ ಶೆಂಬೆಳ್ಳಿ, ವಿಜಯಕುಮಾರ ಬೆಲ್ದೆ, ಶಶಿಕಾಂತ್ ಬಂಬುಳಗಿ, ರೇವಣಸಿದ್ದಪ್ಪ ಪಾಟೀಲ್, ಗೋಪಿಚಂದ್ ತಾಂದಳೆ, ಎಂ.ಪಿ.ಮುಧಾಳೆ, ಸಂತೋಷ್ ಚೆಟ್ಟಿ ಹಾಗೂ ಮಹಾರುದ್ರ ಡಾಕುಳಗೆ ಸೇರಿದಂತೆ ಜಿಲ್ಲೆಯ ಇತರೆ ಪತ್ರಕರ್ತರು ಉಪಸ್ಥಿತರಿದ್ದರು.