ಬೀದರ್ | ಸತತ ಪ್ರಯತ್ನದಿಂದ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವ ಸಮೂಹವನ್ನು ನಿಯಂತ್ರಿಸಲು ಸಾಧ್ಯ : ನ್ಯಾ.ಪ್ರಕಾಶ್ ಬನಸೋಡೆ

ಬೀದರ್ : ಮಧ್ಯಪಾನ ಮತ್ತು ಮಾದಕ ವಸ್ತುಗಳ ಚಟುವಟಿಕೆಗಳಿಗೆ ಯುವ ಸಮೂಹ ಬಲಿಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ, ವಿವಿಧ ಇಲಾಖೆ, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಮತ್ತು ಸಂಘಟಿತ ಪ್ರಯತ್ನದಿಂದ ಮಾತ್ರ ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ್ ಬನಸೋಡೆ ಅವರು ಹೇಳಿದರು.
ಇಂದು ಜಮಗಿ ಔರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ʼಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಹವ್ಯಾಸಗಳು ರೂಢಿಸಿಕೊಂಡು ಮಾದಕ ವಸ್ತುಗಳು ಸೇವನೆ ಬೇಡವೆಂದು ನಿರ್ಧಾರ ಕೈಗೊಳ್ಳಬೇಕು. ತಮ್ಮ ಪರಿಚಯದವರಿಗೂ ಕೂಡಾ ಇವುಗಳನ್ನು ಸೇವನೆ ಮಾಡದಂತೆ ಜಾಗೃತರನ್ನಾಗಿ ಮಾಡಿ ಮಾದಕ ವಸ್ತುಗಳ ದುಷ್ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಂದೀಶ್ವರ್ ನಾಟ್ಯ ಸಂಘ ಚಿಮಕೋಡ ಇವರಿಂದ ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮದ್ಯಪಾನದ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತ ರವಿಶಂಕರ್, ಔರಾದ್ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಗೂ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನಸಾಬ್ ಯಾದವಾಡ್, ಸಿವಿಲ್ ನ್ಯಾಯಧೀಶ ಜೆ.ಎಂ.ಎಫ್.ಸಿ., ಜಿ .ಡಿ ಶ್ರೀಮಾಳೆ, ಔರಾದ್ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಂದೀಪ್ ಮೇತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಆಕಾಶ್ ಸಜ್ಜನಶೆಟ್ಟಿ, ಅಬಕಾರಿ ಇಲಾಖೆಯ ಸಿಬಂದಿ ಹಾಗೂ ಸಂತಪೂರ್ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.