ಬೀದರ್ | ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ : ಉಮೇಶ್ ಸ್ವಾರಳ್ಳಿಕರ್

ಬೀದರ್ : ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪ ನಿರ್ದೇಶಕ ವಿಷ್ಣು ಅವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅವರನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಲಬುರಗಿ ವಿಭಾಗಿಯ ಸಂಚಾಲಕ ಉಮೇಶಕುಮಾರ್ ಸ್ವಾರಳ್ಳಿಕರ್ ಒತ್ತಾಯಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಷ್ಣು ಅವರು ಗ್ರಾಮ ಪಂಚಾಯತ್ ಗಳಿಗೆ ಅಡಿಟ್ ಮಾಡುವುದಕ್ಕೆ ತೆರಳಿದಾಗ ಒಂದು ಗ್ರಾಮ ಪಂಚಾಯತಿಗೆ 30 ಸಾವಿರ ರೂ. ಲಂಚ ಕೇಳಿರುವ ಬಗ್ಗೆ ಅನೇಕ ಪಿಡಿಒ ನಮ್ಮ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇತ್ತಿಚೆಗೆ ಬೆಮಳಖೇಡ ಗ್ರಾಮ ಪಂಚಾಯತ್ ಪಿಡಿಒ ಪಾಶಾ ಅವರಿಗೆ ಲಂಚ ಕೇಳಿದಲ್ಲದೇ ಏರು ಧ್ವನಿಯಲ್ಲಿ ಮಾತನಾಡಿರುವ ಬಗ್ಗೆ ದಾಖಲೆ ಸಹ ಇದೆ ಎಂದು ಆರೋಪಿಸಿದರು.
ಅವರು ಮೂಲತಃ ಬೆಂಗಳೂರಿನವರಾಗಿದ್ದು, ಬಹಳಷ್ಟು ಸಮಯದಲ್ಲಿ ತಮ್ಮ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ದಿನದಂದು ಇವರು ಕಚೇರಿಗೆ ಬಾರದೇ ಮಹಾತ್ಮರಿಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧನೆ ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುವುದರಿಂದ ಇವರು ತಾನೇ ರಾಜ ಎಂಬ ಭ್ರಮೆಯಲ್ಲಿದ್ದಂತೆ ಕಾಣುತ್ತಿದೆ. ಕಳೆದ ಎಳೆಂಟು ತಿಂಗಳ ಹಿಂದೆ ಇವರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ, ಯಾವುದೇ ಪ್ರಯೋಜನವಾಗಿಲ್ಲ. ಇತ್ತಿಚೆಗೆ ಈ ವಿಚಾರವಾಗಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಪ್ರಯೋಜನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಬಾಬುರಾವ್ ಕೌಠಾ, ಜಿಲ್ಲಾ ಖಜಾಂಚಿ ದೇವರಾಜ್ ಡಾಕುಳಗಿ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ್ ಸಂಗಮ್, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಜೈಭೀಮ್ ಶರ್ಮಾ, ಗೋವಿಂದ್ ಬಡಿಗೇರ್, ವಿಜಯಕುಮಾರ್ ಭಾವಿಕಟ್ಟಿ ಹಾಗೂ ಪ್ರಕಾಶ್ ಬಂಗಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.