ಬೀದರ್ | ಕರ್ನಾಟಕ ಪಶುವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ 14ನೇ ಘಟಿಕೋತ್ಸವ ಸಮಾರಂಭ

ಬೀದರ್ : ಕಮಠಾಣ ರಸ್ತೆಯ ನಂದಿನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ 14ನೇ ಘಟಿಕೋತ್ಸವ ಸಮಾರಂಭ ಜರುಗಿತು.
ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ, ಪದವಿ ಪ್ರಧಾನ ಮಾಡಿದರು.
ಪಶು ವೈದ್ಯಕೀಯ ಘಟಿಕೋತ್ಸವದಲ್ಲಿ 15 ಚಿನ್ನದ ಪದಕ ಪಡೆದು ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಚಿತ್ರದುರ್ಗದ ನಿವಾಸಿಯಾದ ರವೀನಾ ಕೆ ಎಸ್ ಅವರು ಗೈರು ಹಾಜರಾಗಿದ್ದು, ಅದೇ ಕಾಲೇಜಿನ ಜೆ.ಪಿ. ನಗರ ನಿವಾಸಿ ಆದಿತ್ಯಾ ಚಿದಾನಂದ್ ಅವರಿಗೆ 9 ಚಿನ್ನ ಲಭಿಸಿವೆ.
ಚಿನ್ನದ ಪದಕ ಪಡೆದವರ ವಿವರ :
ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಚಿತ್ರದರ್ಗದ ಚಳ್ಳಕೆರೆಯ ಚಿಕ್ಕೇನಹಳ್ಳಿ ಗ್ರಾಮದ ನಿವಾಸಿ ದಕ್ಷೀತ್ ಪಿ.ಎಲ್. ಅವರು ಎಂವಿಎಸ್‌ಸಿ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನ ಗಳಿಸಿದರು.
ಸ್ನಾತಕ ಪದವಿಯಲ್ಲಿ 16 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕ, ಡಾಕ್ಟರೇಟ್ ಪದವಿ ಪೂರೈಸಿದ 7 ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ 2 ಚಿನ್ನದ ಪದಕ ಸೇರಿದಂತೆ ಒಟ್ಟು 96 ಚಿನ್ನದ ಪದಕಗಳು ನೀಡಲಾಯಿತು. ಒಟ್ಟು 634 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. 419 ಸ್ನಾತಕ ಪದವೀಧರರು, 187 ಸ್ನಾತಕೋತ್ತರ ಹಾಗೂ 28 ಡಾಕ್ಟರೇಟ್ ಪದವೀಧರರು ಇದರಲ್ಲಿ ಸೇರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪುಣೆಯ ಐ.ಸಿ.ಎಮ್.ಆರ್- ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕ ಡಾ.ನವೀನಕುಮಾರ್, ಕರ್ನಾಟಕ ಪಶುವೈದ್ಯಕೀಯ ಹಾಗೂ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಕುಲಸಚಿವ ಪಿ.ಟಿ.ರಮೇಶ್, ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ್ ಬತಮುರ್ಗೆ ಹಾಗೂ ಇತರೇ ಅಧಿಕಾರಿಗಳು, ಬೋಧಕರು, ಸಿಬ್ಬಂದಿಗಳು ಸೇರಿದಂತೆ ಡಾಕ್ಟರೇಟ್, ಸ್ನಾತಕೋತ್ತರ ಮತ್ತು ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


