ಬೀದರ್ | ಒಳಮೀಸಲಾತಿ ಜಾರಿ ವಿಳಂಬವಾದರೆ ಬೀದಿಗಿಳಿದು ಹೋರಾಟ : ಜಾನಸನ್ ಘೋಡೆ

ಬೀದರ್ : ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜಾನಸನ್ ಘೋಡೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರ, ನೊಂದ ಜನರ ಮುಖ್ಯಮಂತ್ರಿ ಎಂದೇ ಹೆಸರಾಗಿರುವ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಒಂದೊಮ್ಮೆ ವಿಳಂಬವಾದಲ್ಲಿ ಸಮುದಾಯದ ಜನರೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ವರದಿ ನೀಡಲು ಎರಡು ತಿಂಗಳ ಗಡುವು ನೀಡಲಾಗಿತ್ತು. ಆದರೆ, ಅವಧಿ ಮುಗಿದರೂ ವರದಿ ಸಲ್ಲಿಕೆಯಾಗಿಲ್ಲ. ಆಯೋಗಕ್ಕೆ 40 ಇಲಾಖೆಗಳು ಸ್ಪಷ್ಟ ಅಂಕಿ-ಅಂಶ ನೀಡುವಲ್ಲಿ ನಿರ್ಲಕ್ಷ್ಯ ತೋರಿವೆ. ಜೊತೆಗೆ ದತ್ತಾಂಶ ಸಮಸ್ಯೆ ಎದುರಾಗಿದೆ ಎಂಬ ಮಾಹಿತಿ ಇದೆ. ಆದ್ದರಿಂದ ಮಾದಿಗ ಸಮುದಾಯದಲ್ಲಿ ಆತಂಕ ಎದುರಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಒತ್ತಡ ತಂತ್ರಗಳಿಗೆ ಮಣಿದು ವಿಳಂಬ ನೀತಿ ಅನುಸರಿಸಿದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಒಳಮೀಸಲಾತಿ ನಮ್ಮ ಹಕ್ಕು. ಬಲಾಡ್ಯರ ಮಧ್ಯ ಕೂಲಿ, ಅನಕ್ಷರತೆ ಕಾರಣಕ್ಕೆ ಮೀಸಲು ಪಡೆಯುವಲ್ಲಿ ವಿಫಲವಾಗಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯೊಂದೇ ಏಕೈಕ ಆಸರೆಯಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರು ದಿಟ್ಟ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.