ಬೀದರ್ | ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಪ್ರವೇಶ ಪರೀಕ್ಷೆಯ ಕರಪತ್ರ ಬಿಡುಗಡೆ

ಬೀದರ್ : ಬಸವಕಲ್ಯಾಣದ ಅನುಭವ ಮಂಟಪದ ವತಿಯಿಂದ ಬೀದರ್ ನಗರದಲ್ಲಿ ನಡೆಯುತ್ತಿರುವ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಪ್ರವೇಶಕ್ಕಾಗಿ ಏ.6 ರಂದು ಹಮ್ಮಿಕೊಳ್ಳಲಾದ ಪರೀಕ್ಷೆಯ ಮಾಹಿತಿ ನೀಡುವ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಸೋಮವಾರ ಭಾಲ್ಕಿಯಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರು ದಿವ್ಯ ಸಾನಿಧ್ಯದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕರಪತ್ರ ಬಿಡುಗಡೆಗೊಳಿಸಿದರು.
ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಭಾಲ್ಕಿ ಶ್ರೀ ಮಠದ ಪೂಜ್ಯರು ಬಸವತತ್ವ ಪ್ರಸಾರವೇ ತಮ್ಮ ಮುಖ್ಯ ಗುರಿಯಾಗಿಟ್ಟುಕೊಂಡಿದ್ದಾರೆ. ಆ ದಿಶೆಯಲ್ಲಿ ನಾಡು ಹೊರನಾಡಿನಲ್ಲಿ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಅದೇ ಕಾರ್ಯಕ್ರಮದ ಒಂದು ಭಾಗವೆಂದರೆ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯವಾಗಿದೆ. ಇಂದು ಶಿಕ್ಷಣದ ಜೊತೆ ಸಂಸ್ಕಾರ ಬಹಳ ಮಹತ್ವದ್ದಾಗಿದೆ. ಈ ವಿದ್ಯಾಲಯದಲ್ಲಿ ಪೂಜ್ಯರು ಶಿಕ್ಷಣದ ಜೊತೆಗೆ ಶರಣ ಸಂಸ್ಕೃತಿಯ ವಿಚಾರ ನೀಡುತ್ತಿರುವುದು ಈ ಕಾಲಮಾನದ ಅಗತ್ಯವಾಗಿದೆ ಎಂದು ತಿಳಿಸಿದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಶಾಲಾ ಪಠ್ಯದ ಜೊತೆಗೆ ಶರಣ ಸಂಸ್ಕೃತಿಯ ವಿಶೇಷ ಅಧ್ಯಯನ ಮಾಡಿಸುವ ನಾಡಿನ ಏಕೈಕ ವಿದ್ಯಾಲಯವಾಗಿದೆ. ಈ ವಿದ್ಯಾಲಯದಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ ಊಟ, ವಸತಿ, ಶಿಕ್ಷಣ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಈ ಅವಕಾಶ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಇದೆ. ಪ್ರತಿವರ್ಷ 20 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುತ್ತದೆ. ಅದಕ್ಕಾಗಿ ಆಕಸ್ತ ಪಾಲಕರು ಮತ್ತು ವಿದ್ಯಾರ್ಥಿಗಳು ಬೀದರ್ ನ ವಿದ್ಯಾನಗರದಲ್ಲಿರುವ ಶ್ರೀ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಏ.6 ರಂದು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಬು ವಾಲಿ, ಡಿ.ಕೆ.ಸಿದ್ರಾಮ್, ಶಿವಕುಮಾರ್ ಕಲ್ಯಾಣೆ, ಸೋಮನಾಥಪ್ಪ ಅಷ್ಟೂರೆ, ಸಿದ್ರಾಮಪ್ಪ ವಂಕೆ, ಸಿದ್ರಾಮಪ್ಪ ಅಣದೂರೆ, ಬಸವರಾಜ್ ವಂಕೆ ಹಾಗೂ ಸಿದ್ಧಯ್ಯ ಕಾವಡಿಮಠ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿರಿದ್ದರು.