ವಸತಿ ರಹಿತ ಕುಟುಂಬಗಳ ಪಟ್ಟಿ ತಯಾರಿಸಿ : ಸಂಸದ ಸಾಗರ್ ಖಂಡ್ರೆ ಸೂಚನೆ

ಬೀದರ್ : ಸರ್ಕಾರದ ವಸತಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ತ್ವರಿತವಾಗಿ ಜಿಲ್ಲೆಯ ವಸತಿ ರಹಿತ ಕುಟುಂಬಗಳ ಪಟ್ಟಿ ತಯಾರಿಸಿ ಎಂದು ಅಧಿಕಾರಿಗಳಿಗೆ ಲೋಕಸಭಾ ಸಂಸದ ಸಾಗರ್ ಖಂಡ್ರೆ ಅವರು ಸೂಚನೆ ನೀಡಿದರು.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಪಿಎಂಎವೈ (ಗ್ರಾಮೀಣ ಮತ್ತು ನಗರ) ವಸತಿ ಯೋಜನೆಯ ಅನುಷ್ಠಾನ ಕುರಿತಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಬೀದರ್ ಲೋಕಸಭಾ ಕ್ಷೇತ್ರ ಗುಡಿಸಲು ಮುಕ್ತಗೊಳಿಸುವ ಗುರಿ ಹೊಂದಿದ್ದು, ಯಾವುದೇ ಕುಟುಂಬವೂ ವಸತಿ ರಹಿತವಾಗಿರಬಾರದು. ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ) ಯೋಜನೆ ಅಡಿಯಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆಗೆ ಮಾ. 31 ರವರೆಗೆ ಕಾಲವಕಾಶ ಇರುವುದರಿಂದ, ಈ ಸಮೀಕ್ಷೆಯಲ್ಲಿ ಎಲ್ಲಾರೂ ಕಡ್ಡಾಯವಾಗಿ ಪಾಲ್ಗೊಂಡು ಸಮೀಕ್ಷೆಯ ಮಾಹಿತಿಯನ್ನು awass of portal ಅಳವಡಿಸಲು ಹಾಗೂ 2024-25ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾದ ಗುರಿಗೆ ಅನುಗುಣವಾಗಿ ಆದ್ಯತೆಯ ಪಟ್ಟಿಯ ಪ್ರಕಾರ ಫಲಾನುಭವಿಗಳ ಅನುಮೋದನೆ ಪಡೆದು ಬಡ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ಸರ್ಕಾರದಿಂದ ನಿಗದಿಪಡಿಸಿದ ಕಾಲಮೀತಿಯೊಳಗೆ ಸದರಿ ಸಮೀಕ್ಷೆ ಹಾಗೂ ಫಲಾನುಭವಿಗಳ ಅನುಮೋದನೆಯನ್ನು ಯಶಸ್ವಿಗೊಳಿಸದೆ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರಿಗೆ ಸೂಚಿಸಿದರು.
ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜಲ ಜೀವನ ಮೀಷನ್ ಯೋಜನೆಯ ನಿಯಮಾನುಸಾರವಾಗಿ ಅನುಷ್ಠಾನಗೊಳಿಸಲು ಅವರು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಪ್ರಮುಖ ಅಧಿಕಾರಿಗಳು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.