ಬೀದರ್ | ಗಾಂಜಾ ಮಾರುವುದನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಎಂದು ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಪ್ರಕರಣ ದಾಖಲು

ಬೀದರ್ : ʼʼಗಾಂಜಾ ಮಾರುವುದನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಮಾಡಿದ ಜಿಹಾದಿಗಳುʼʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼʼಬೀದರ್ ನಲ್ಲಿ ಗಾಂಜಾ ಮಾರುವುದನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಮಾಡಿದ ಜಿಹಾದಿಗಳು. ರಾಜ್ಯದಲ್ಲಿ ಪೋಲೀಸ್ ಇಲಾಖೆ ಇದೆಯೋ ಅಥವಾ?ʼʼ ಎಂದು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು, ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಮಧ್ಯೆ ವಾಹನ ಪಾರ್ಕಿಂಗ್ ಸಂಬಂಧ ವೈಯಕ್ತಿಕ ಜಗಳ ನಡೆದಿತ್ತು. ಆದರೆ ಕೆಲವು ಕಿಡಿಗೇಡಿಗಳು, ವಿಡಿಯೋ, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೋಮು ಸೌಹಾರ್ಧಕ್ಕೆ ಧಕ್ಕೆ ತರುವಂತೆ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿದ್ದು, ಇದಕ್ಕೆ ಸಾರ್ವಜನಿಕರು ಗಮನ ಕೊಡಬಾರದು ಎಂದು ಕೋರಿದ್ದಾರೆ.
ಸುಳ್ಳು ಸುದ್ದಿ, ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಯಾವುದೇ ಸಂದೇಶ, ವಿಡಿಯೋ, ಹೇಳಿಕೆಗಳನ್ನು ಹರಿಬಿಡುವವರ ಮೇಲೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.