ಮಾ.27, 28 ರಂದು ಬೆಂಗಳೂರಿನಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ವಿಚಾರ ಸಂಕಿರಣ : ಫರ್ನಾಂಡಿಸ್ ಹಿಪ್ಪಳಗಾಂವ್

ಬೀದರ್ : ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾ.27 ಹಾಗೂ 28 ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರಾಧ್ಯಕ್ಷ ಮಂದಾಕೃಷ್ಣ ಮಾದಿಗ ಅವರ ಮಾರ್ಗದರ್ಶನದಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಅವರು ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾ.27ರಂದು ಕಾರ್ಯಾಗಾರ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಜರುಗುವುದು. ಹಾಗೆಯೇ ಮಾ.28ರಂದು ಒಳ ಮೀಸಲಾತಿ ಬೆಂಬಲಿಸುವ ಎಲ್ಲ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಐಎಎಸ್, ಐಪಿಎಸ್, ಕೆಎಎಸ್ ಹಾಲಿ ಮತ್ತು ಮಾಜಿ ಅಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕ, ಸಚಿವರು ಜೊತೆಗೆ ಮಾದರ ಚನ್ನಯ್ಯ ಸ್ವಾಮಿಜಿ ಅವರು ಸೇರಿದಂತೆ ಇತರೆ ಮಠಾಧೀಶರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಅಂದು ಮಧ್ಯಾಹ್ನದ ಬಳಿಕ ಮುಂದಿನ ಹೋರಾಟದ ಬಗ್ಗೆ ಮಂದಾಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮೇಲಿನ ಎಲ್ಲ ಮಹನೀಯರ ಜೊತೆ ಮುಂದಿನ ಹೋರಾಟದ ಬಗ್ಗೆ ವಿಶೇಷ ಸಭೆ ಮಾಡಲಾಗುವುದು. ಈ ಎರಡು ದಿವಸದ ಕಾರ್ಯಾಗಾರ ಹಾಗೂ ಸಭೆಯಲ್ಲಿ ಜಿಲ್ಲೆಯ ಸಮಾಜ ಬಾಂಧವರು, ವಕೀಲರು, ಒಳಮೀಸಲಾತಿ ಪರ ಹೋರಾಟಗಾರರು, ಸಂಘಟನೆಗಳ ಪ್ರಮುಖರು, ಒಟ್ಟಾರೆ ಒಳ ಮೀಸಲಾತಿ ಪರ ಬೆಂಬಲಿಸುವ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಜಿಲ್ಲಾ ವಕ್ತಾರ ಶಿವಣ್ಣ ಹಿಪ್ಪಳಗಾಂವ್, ಜಿಲ್ಲಾ ಕಾರ್ಯದರ್ಶಿ ದತ್ತಾತ್ರೆಯ ಜ್ಯೋತಿ, ಸಮಾಜದ ಮುಖಂಡ ಸುಧಾಕರ್ ಸೂರ್ಯವಂಶಿ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ರಾಹುಲ್ ನಂದಿ ಇದ್ದರು.