ಅಮಿತ್ ಶಾ ರಾಜೀನಾಮೆ ಆಗ್ರಹಿಸಿ ಜ.9ರಂದು ಬೀದರ್ ಬಂದ್ ಗೆ ಕರೆ

Update: 2025-01-06 12:29 GMT

ಬೀದರ್ : ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಡಿ.9 ರಂದು ಶಾಂತಿಯುತ ಬೀದರ್ ಬಂದ್ ಗೆ ಕರೆ ನೀಡಿದ್ದೇವೆ. ಸಾರ್ವಜನಿಕರು ಈ ಬಂದ್ ಗೆ ಸಹಕರಿಸಬೇಕು ಎಂದು ಸ್ವಾಭಿಮಾನಿ ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯ ಅಧ್ಯಕ್ಷ ಉಮೇಶ್ ಸ್ವಾರಳ್ಳಿಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಡಿ.24 ರಂದು ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಿ ಅಮಿತ್ ಶಾ ರಾಜೀನಾಮೆಗೆ ಗಡುವು ನೀಡಿದ್ದೇವೆ. ಆದರೆ ಅವರು ಇನ್ನೂ ಅವರು ರಾಜೀನಾಮೆ ನೀಡಿಲ್ಲ ಹಾಗಾಗಿ ಬೀದರ್ ಬಂದ್ ಗೆ ಕರೆ ನೀಡಿದ್ದೇವೆ ಎಂದರು.

ಅಂದು ಬೆಳಿಗ್ಗೆ 8 ಗಂಟೆಗೆ ಎಲ್ಲರೂ ಅಂಬೇಡ್ಕರ್ ವೃತ್ತದ ಬಳಿ ಸೇರುತ್ತೇವೆ. ನಂತರ ಒಂದೊಂದು ತಂಡ ಒಂದೊಂದು ಮಾರ್ಗವಾಗಿ ನಗರದಾದ್ಯಂತ ಸಂಚರಿಸಿ ಅಂಗಡಿ -ಮುಗ್ಗಟ್ಟುಗಳನ್ನು ಬಂದ್ ಗೆ ಸಹಕರಿಸುವಂತೆ ಮನವಿ ಮಾಡುತ್ತೇವೆ. ಕೊನೆಗೆ ಅಂಬೇಡ್ಕರ್ ವೃತ್ತದ ಹತ್ತಿರ ನಮ್ಮ ಪ್ರಮುಖ ಹೋರಾಟಗಾರರು ಮಾತನಾಡಿದ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಆಟೋ ಚಾಲಕರು, ವ್ಯಾಪಾರಸ್ಥರು, ಅಂಗಡಿ ಮಾಲಕರು, ಸಾರಿಗೆ ಇಲಾಖೆ, ಅಬಕಾರಿ ಇಲಾಖೆಗೆ ಸೇರಿದಂತೆ ಎಲ್ಲಾ ಸಂಘಗಳ ಅಧ್ಯಕ್ಷರಿಗೆ ಬಂದ್ ಗೆ ಸಹಕರಿಸುವಂತೆ ಮನವಿ ಪತ್ರ ಸಲ್ಲಿಸಿದ್ದೇವೆ. ಹಾಗೆಯೇ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸುವಂತೆ ಡಿಡಿಪಿಐ, ಬಿಇಓ ಅವರಿಗೂ ಮನವಿ ಸಲ್ಲಿಸಿದ್ದೇವೆ. ಎಲ್ಲರೂ ಬೀದರ್ ಬಂದ್ ಗೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡದಿದ್ದರೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬಸ್ ವ್ಯವಸ್ಥೆ ಇರದ ಕಾರಣ ಪೋಷಕರು ತಮ್ಮ ವಾಹನಗಳ ಮೂಲಕ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿಗೆ ಕರೆದೋಯ್ಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಬೀದರ್ ಬಂದ್ ಗೆ ಜಿಲ್ಲೆಯ ಬುದ್ಧ, ಬಸವ, ಅಂಬೇಡ್ಕರ್ ರವರ ಅನುಯಾಯಿಗಳು, ಪ್ರಗತಿಪರರು, ಸರ್ವಧರ್ಮ ಗುರುಗಳು, ಚಿಂತಕರು, ಕಾರ್ಮಿಕರು, ಯುವಕ, ಯುವತಿಯರು ಸೇರಿದಂತೆ ಎಲ್ಲರು ಬೆಂಬಲ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ರಾಜಕುಮಾರ್ ಮೂಲಭಾರತಿ, ಕಲ್ಯಾಣರಾವ ಭೋಸ್ಲೆ, ಚಂದ್ರಕಾಂತ್ ನಿರಾಟೆ, ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ವಾಲ್ದೋಡ್ಡಿ, ಉಪಾಧ್ಯಕ್ಷರುಗಳಾದ ರಾಜಕುಮಾರ ಗುನ್ನಳ್ಳಿ, ಅಂಬರೀಷ್ ಕುದರೆ ಹಾಗೂ ಸಂಘಟನಾ ಕಾರ್ಯದರ್ಶಿ ರಾಹುಲ್ ಡಾಂಗೆ ಸೇರಿದಂತೆ ಇತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News