ಬೀದರ್ | ನಾಲ್ಕು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿ ಜ.7 ರಂದು ಬಿಜೆಪಿ ಪ್ರತಿಭಟನೆ
ಬೀದರ್ : ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೇರಿ ನಾಲ್ಕು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಜ.7 ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈಶ್ವರ್ ಖಂಡ್ರೆ ಅವರು ಸಚಿನ್ ಪಂಚಾಳ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಫ್ ಎಸ್ ಎಲ್ ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಇವಾಗ ಎಫ್ ಎಸ್ ಎಲ್ ವರದಿ ಬಂದು ಎರಡು ಮೂರು ದಿನ ಕಳೆದಿದ್ದಾವೆ. ಆದರೆ ಇಲ್ಲಿವರೆಗೆ ಅಪರಾಧಿಗಳ ಬಂಧನವಾಗಿಲ್ಲ ಎಂದು
ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಅವರ ಸಹೋದರಿಯರು ಕಂಪ್ಲೇಂಟ್ ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೋಲೀಸರು ನಡೆಸುಕೊಂಡ ರೀತಿ ನೋಡಿದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಎಷ್ಟುರ ಮಟ್ಟಿಗೆ ಹದಗೆಟ್ಟಿದೆ ಎಂಬುವುದು ಗೊತ್ತಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ದೂರಿದರು.
ಜಿಲ್ಲೆ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಆದ್ದರಿಂದ ಗೃಹ ಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಬಾಣಂತಿಯರ ಸಾವಿಗೆ ಪರೋಕ್ಷವಾಗಿ ಕಾರಣರಾದ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿನ್ ಬರೆದ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆಯವರ ಹೆಸರು ಉಲ್ಲೇಖವಾಗಿದೆ. ತಕ್ಷಣವೇ ಈ ಎಲ್ಲರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಶಾಸಕ ಶರಣು ಸಲಗರ್ ಮಾತನಾಡಿ, ಸಿಐಡಿ ತನಿಖೆಯಿಂದ ಸಚಿನ್ ಪಾಂಚಾಳ್ ಅವರಿಗೆ ನ್ಯಾಯ ಸಿಗುವುದಿಲ್ಲ. ಕೆಲಸಕ್ಕೆ ಬಾರದ ಅಧಿಕಾರಿಗಳಿಗೆ ತಂದು ಸಿಐಡಿಗೆ ಹಾಕುತ್ತಾರೆ. ಸಿಐಡಿ ಎಂದರೆ ಕಾಂಗ್ರೇಸ್ ಇನ್ವೆಸ್ಟಿಗೇಷನ್ ಏಜೇನ್ಸಿ ಎಂದು ಲೇವಡಿ ಮಾಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್, ಮಾಜಿ ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿ ಹೊಸಳ್ಳಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೇಮಾ ತುಕ್ಕಾರೆಡ್ಡಿ, ಮುಖಂಡ ಸೋಮಶೇಖರ್ ಪಾಟೀಲ್ ಗಾದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.