ಪ್ರತಾಪುರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚುನಾವಣೆ : ಖಂಡೆರಾವ್ ಕುಲಕರ್ಣಿ ಅವಿರೋಧ ಆಯ್ಕೆ
ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಪ್ರತಾಪೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಿದ್ದು, ಖಂಡೆರಾವ್ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾದರು.
21 ಸದಸ್ಯರನ್ನು ಒಳಗೊಂಡ ಈ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಉಪಾಧ್ಯಕ್ಷ ಸಂತೋಷ್ ಬಿರಾದಾರ ಅವರು ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿದಂತೆ ಒಟ್ಟು 21 ಸದಸ್ಯರಲ್ಲಿ 15 ಸದಸ್ಯರು ಹಾಜರಿದ್ದರು. ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಖಂಡೆರಾವ್ ಕುಲಕರ್ಣಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಕುಲಕರ್ಣಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ತಾಲ್ಲೂಕು ಪಂಚಾಯತ್ ಇಒ ರಮೇಶ್ ಸುಲ್ಫಿ ಅವರು ಖಂಡೆರಾವ್ ಕುಲಕರ್ಣಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಮೇತ್ರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಮ್ ಧೂಳಖೇಡ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.