ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಬೀದರ್ ಸಂಪೂರ್ಣ ಬಂದ್: ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ

Update: 2025-01-09 13:17 GMT

ಬೀದರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಆಗ್ರಹಿಸಿ ಇಂದು ಬೀದರ್ ಬಂದ್ ಮಾಡುವುದರ ಜೊತೆಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದ ಹಿನ್ನಲೆಯಲ್ಲಿ ಅವರ ರಾಜೀನಾಮೆ ಆಗ್ರಹಿಸಿ ಇಂದು ದಲಿತ ಸಂಘಟನೆಗಳು ಬೀದರ್ ಬಂದ್ ಗೆ ಕರೆ ನೀಡಿದ್ದವು.

ಈ ಬೀದರ್ ಬಂದ್ ಬೆಂಬಲಿಸಿ ಭಾಲ್ಕಿ, ಹುಮನಾಬಾದ್ ಸೇರಿದಂತೆ ಎಲ್ಲ ತಾಲ್ಲೂಕಿನ ಜನ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಬಂದು ಜಮಾವಣೆಗೊಂಡಿತ್ತು. ನಗರದಲ್ಲಿರುವ ವಸತಿ ನಿಲಯಗಳ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತದ ಹತ್ತಿರ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ನಾಯಕರಲ್ಲ. ಅವರು ಭಾರತದ ಎಲ್ಲ ಶೋಷಿತರ, ಮಹಿಳೆಯರ ಕೊರಳ ಧ್ವನಿಯಾಗಿದ್ದಾರೆ. ಅವರು ಜಾತಿ, ಧರ್ಮಗಳನ್ನು ಪರಿಗಣಿಸದೇ ಸಮಸ್ತ ಭಾರತೀಯರಿಗಾಗಿ ತಮ್ಮ ಬದುಕು ಪಣಕಿಟ್ಟಿದ್ದಾರೆ. ಅಂತಹ ಮಹಾನ ನಾಯಕನನ್ನು ಸಂವಿಧಾನದ ಹುದ್ದೆಯಲ್ಲಿರುವ ಅಮಿತ್ ಶಾ ಅವರು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ಅಪಮಾನ ಮಾಡಿದ್ದಾರೆ ಎಂದು ಮನವಿ ಪತ್ರದಲ್ಲಿ ದೂರಿದ್ದಾರೆ.

ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಪ್ರಜ್ಞಾಪೂರ್ವಕವಾಗಿಯೇ ಅವಮಾನ ಮಾಡಿದ್ದಾರೆ. ಅ ಅವರನ್ನು ಮುನ್ನಡೆಸುವ ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ ಮನಸ್ಥಿತಿ ಎದೆಯಲ್ಲಿ ಅದುಮಿಟ್ಟುಕೊಂಡ ಅಂತರಾಳದ ಮಾತು ಹೊರಗಡೆ ಬಂದಿದ್ದಾವೆ. ಇದು ಅಂಬೇಡ್ಕರ್ ಮತ್ತು ಸಂವಿಧಾನದ ಮೇಲಿನ ಆಕ್ರಮವಾಗಿದೆ. ಇದರಿಂದಾಗಿ ಕೋಟ್ಯಂತರ ಭಾರತೀಯರಿಗೆ ನೋವುಂಟಾಗಿದೆ. ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳಾಗುತ್ತಿದ್ದರೂ ಸಹ ಅವರು ರಾಜೀನಾಮೆ ಸಲ್ಲಿಸುತ್ತಿಲ್ಲ. ಹಾಗಾಗಿ ರಾಷ್ಟ್ರಪತಿಗಳು ತಕ್ಷಣವೇ ಅವರ ರಾಜೀನಾಮೆ ಪಡೆದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬೀದರ್ ಬಂದ್ ಗೆ ಸ್ಪಂದಿಸಿ ನಗರದ ಎಲ್ಲ ಅಂಗಡಿಗಳ ಮಾಲೀಕರು ಮುಂಜಾನೆಯಿಂದ ತಮ್ಮ ಅಂಗಡಿಗಳು ಸ್ವ ಇಚ್ಛೆಯಿಂದ ಬಂದ್ ಮಾಡಿದ್ದರು. ದಿನಾಲೂ ಜನಗಳಿಂದ ಗಿಜುಗೂಡುತಿದ್ದ ಪ್ರಮುಖ ರಸ್ತೆಗಳು ಖಾಲಿ ಖಾಲಿ ಕಾಣಿಸುತಿದ್ದವು. ಸರಕಾರಿ ಬಸ್ಸುಗಳು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಬಸ್ಸು ನಿಲ್ದಾಣ ಜನಗಳಿಲ್ಲದೆ ಬಿಕೋ ಎನ್ನುತಿತ್ತು.

ಈ ಸಂದರ್ಭದಲ್ಲಿ ಸ್ವಾಭಿಮಾನಿ ಡಾ. ಬಿ. ಆರ್ ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯ ಅಧ್ಯಕ್ಷ ಉಮೇಶಕುಮಾರ್ ಸ್ವಾರಳ್ಳಿಕರ್, ಗೌರವಾಧ್ಯಕ್ಷರಾದ ರಾಜಕುಮಾರ್ ಮೂಲಭಾರತಿ, ಚಂದ್ರಕಾಂತ್ ನಿರಾಟೆ, ಕಲ್ಯಾಣರಾವ್ ಭೋಸ್ಲೆ, ಉಪಾಧ್ಯಕ್ಷ ಅಂಬರೀಷ್ ಕುದರೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಗೊರನಾಳಕರ್, ಹಿರಿಯ ದಲಿತ ಮುಖಂಡ ವಿಠಲದಾಸ್ ಪ್ಯಾಗೆ, ವಿಷ್ಣುವರ್ಧನ್ ವಾಲ್ದೊಡ್ಡಿ, ಅಭಿ ಕಾಂಬ್ಳೆ, ವೇಲಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಮುಬಶೀರ್ ಶಿಂಧೆ, ಮುಸ್ಲಿಂ ಹ್ಯೂಮನ್ ರೈಟ್ಸ್ ಅಸೋಷಿಯಷನ್ ಜಿಲ್ಲಾಧ್ಯಕ್ಷ ಸೈಯದ್ ವಹೀದ್ ಲಖನ್, ಮೂಮೆಂಟ್ ಆಫ್ ಜಸ್ಟಿಸ್ ಜಿಲ್ಲಾಧ್ಯಕ್ಷ ಸಾರಫರಾಜ್ ಹಾಸ್ಮಿ, ರಾಜಕುಮಾರ್ ಡೊಂಗರೆ, ಸಂಜುಕುಮಾರ್ ಮೇತ್ರೆ, ಪವನ್ ಮಿಠಾರೆ, ಪ್ರಕಾಶ್ ರಾವಣ, ಹರ್ಷಿತ್ ದಾಂಡೇಕರ್ ಹಾಗೂ ರಾಹುಲ್ ಡಾಂಗೆ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News