ಬೀದರ್ | ಎರಡು ವರ್ಷದಿಂದ ನಡೆಯುತ್ತಿರುವ ಕಾರಂಜಾ ಸಂತ್ರಸ್ತರ ಸತ್ಯಾಗ್ರಹ ಅಂತ್ಯ

Update: 2025-01-11 12:58 GMT

ಬೀದರ್ : ಕಾರಂಜಾ ಸಂತ್ರಸ್ತರು ವೈಜ್ಞಾನಿಕ ಪರಿಹಾರಕ್ಕಾಗಿ ಆಗ್ರಹಿಸಿ ಸುಮಾರು ಎರಡು ವರ್ಷಕ್ಕಿಂತ ಹೆಚ್ಚು ದಿನಗಳ ಕಾಲ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಫುಟ್ ಪಾತ್ ಮೇಲೆ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಭರವಸೆ ಮೇರೆಗೆ ಕೈ ಬಿಡಲಾಯಿತು.

ಇಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಗಿತ ಕಾರ್ಯಕ್ರಮದಲ್ಲಿ ಈಶ್ವರ್ ಖಂಡ್ರೆ ಅವರು ಮಾತನಾಡಿ, ಕಾರಂಜಾ ಜಲಾಶಯವು ಬೀದರ್, ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ಸೇರಿದಂತೆ ಜಿಲ್ಲಾದ್ಯಂತ ಜನರಿಗೆ ಕುಡಿಯುವ ನೀರು ಪೂರೈಸುತ್ತಿದೆ. ಇದು ನಮ್ಮ ಜಿಲ್ಲೆಯ ಜೀವ ಜಲಾಶಯವಾಗಿದೆ. ಈ ಜಲಾಶಯದಿಂದ ಜಿಲ್ಲೆಯ 18 ರಿಂದ 20 ಲಕ್ಷ ಜನರಿಗೆ ಸಹಾಯವಾಗುತ್ತಿದೆ ಎಂದು ಹೇಳಿದರು.

ಈ ಜಲಾಶಯದಲ್ಲಿ 7 ರಿಂದ 8 ಗ್ರಾಮಗಳು ಸಂಪೂರ್ಣವಾಗಿ ಮುಳುಗಿವೆ. 20 ಸಾವಿರ ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲಾಗಿತ್ತು. 1970 ರಿಂದ ಇಲ್ಲಿವರೆಗೆ ಹೋರಾಟಗಳು ನಡೆದಿವೆ. ಅದಾಗಲೇ ಕೆಲವೊಂದಿಷ್ಟು ಜನ ಕೋರ್ಟಿಗೆ ಹೋಗಿ ಪರಿಹಾರ ಪಡೆದಿದ್ದಾರೆ. ಆದರೆ ಮುಗ್ಧರು, ಯಾರಿಗೆ ಕೋರ್ಟ್ ಗೆ ಹೋಗುವುದಕ್ಕೆ ಆಗುವುದಿಲ್ಲವೋ ಅವರಿಗೆ ಪರಿಹಾರ ಸಿಕ್ಕಿಲ್ಲ ಎಂದರು.

ಮುಳುಗಡೆಯಾದ ಸಮಯದಲ್ಲಿ ಆ ಭೂಮಿಯ ಬೆಲೆ ಅತ್ಯಂತ ಕಡಿಮೆ ಇತ್ತು. ಆದರೆ ಅದಕ್ಕೆ ಇವಾಗ ಬೆಲೆ ಕಟ್ಟಲು ಆಗುವುದಿಲ್ಲ. ಕೋರ್ಟ್ ತೀರ್ಪಿನ ಆಧಾರದ ಮೇಲೆ ಅವರು ಪರಿಹಾರ ಪಡೆದ ಬೆಲೆಯೇ ಕೇಳುತಿದ್ದೀರಿ. ನಿಮ್ಮ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ. ಈ ಸಮಸ್ಯೆ ಬಗೆಹರಿಸುವುದಕ್ಕೋಸ್ಕರ ಮುಖ್ಯಮಂತ್ರಿಗಳು ತಾಂತ್ರಿಕ ಸಮಿತಿ ರಚನೆ ಮಾಡಿದ್ದಾರೆ. ಆದಷ್ಟು ಬೇಗ ನಾವು ಈ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿ ನಾವು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸಚಿವರ ಭರವಸೆಯ ಮೇರೆಗೆ ಸತ್ಯಾಗ್ರಹ ಹಿಂಪಡೆಯುವ ಬಗ್ಗೆ ಈ ಹೋರಾಟಕ್ಕೆ ನಿರಂತರವಾಗಿ ಬೆಂಬಲಿಸಿದ ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರ ಡಾ.ಲಕ್ಷ್ಮಣ ದಸ್ತಿಯವರು ರೈತ ಹಿತರಕ್ಷಣಾ ಸಮಿತಿಗೆ ಮನವರಿಕೆ ಮಾಡಿದರು. ಇದಕ್ಕೆ ರೈತ ಸಂತ್ರಸ್ತರ ಪರವಾಗಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಹುಚಕನಳ್ಳಿ ಅವರು ಸರ್ವ ಸಮಿತಿಯಿಂದ ಒಪ್ಪಿಗೆ ನೀಡಿ ಸತ್ಯಾಗ್ರಹ ಹಿಂಪಡೆಯುವ ಬಗ್ಗೆ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಶಾಸಕ ಶೈಲೆಂದ್ರ ಬೆಲ್ದಾಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಮುಖಂಡರಾದ ಬಸವರಾಜ ಜಾಬಶೆಟ್ಟಿ, ಬಸವರಾಜ ದೇಶಮುಖ್, ಪ್ರೊ.ಆರ್ ಕೆ ಹುಡಗಿ, ಪ್ರೊ. ಬಸವರಾಜ್ ಕುಮ್ನೂರ್, ಮನ್ನನ್ ಶೇಠ್, ಎಮ್ ಡಿ ಗೌಸ್, ವಿನಯ್ ಮಾಳಗೆ, ರೋಹನಕುಮಾರ್, ಕೇದಾರನಾಥ್ ಪಾಟೀಲ್, ಮಹೇಶ್ ಮೂಲಗೆ ಹಾಗೂ ಭೀಮರೆಡ್ಡಿ ಬೆಳ್ಳೋರ್ ಸೇರಿದಂತೆ ನೂರಾರು ಜನ ರೈತ ಸಂತ್ರಸ್ತರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News