ಬೀದರ್ | ನಿರ್ಣಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಪ್ರಕರಣ ದಾಖಲು
ಬೀದರ್ : ಸರಕಾರದ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಎಂಬ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಈ ಅಧಿಕಾರಿ ವಿರುದ್ಧ 2023-24ನೇ ಸಾಲಿನ ನಿರ್ಣಾ ಗ್ರಾಮ ಪಂಚಾಯತ್ ನಲ್ಲಿ 15ನೇ ಹಣಕಾಸು ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡ ಹಾಗೂ ಕ್ರಿಯಾ ಯೋಜನೆಯನ್ನು ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯದೇ, ಸರಕಾರದ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಿ ಹಣ ಖರ್ಚು ಮಾಡಿದ್ದ ಆರೋಪವಿತ್ತು. ಹಾಗೆಯೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಸೂಲಿಯಾದ ತೆರಿಗೆ ಮೊತ್ತವನ್ನು ಗ್ರಾಮ ಪಂಚಾಯತ್ ಸಿಬ್ಬಂದಿ ಹೆಸರಿನಲ್ಲಿ ಚೆಕ್ ನೀಡುವ ಮೂಲಕ ನಿಯಮಬಾಹಿರವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಜಂಟಿ ವರದಿಯ ಹಿನ್ನೆಲೆಯಲ್ಲಿ ಚಿಟಗುಪ್ಪ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಮದರಗಾಂವ್, ಮನ್ನಾಎಖೇಳ್ಳಿ ಪೋಲಿಸ್ ಠಾಣೆಯಲ್ಲಿ ಆರೋಪವಿರುವ ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.