ಬೀದರ್ | ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ ಇಡೀ ಮಾನವ ವಿರೋಧಿಯಾಗಿದೆ : ಪಿಂಟು ಕಾಂಬ್ಳೆ
ಬೀದರ್ : ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ, ಇಡೀ ಮಾನವ ವಿರೋಧಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ತಾಲೂಕಾ ಸಂಚಾಲಕ ಪಿಂಟು ಕಾಂಬ್ಳೆ ಅಭಿಪ್ರಾಯಪಟ್ಟರು.
ಬಸವಕಲ್ಯಾಣದಲ್ಲಿ ಮನುಸ್ಮೃತಿ ಪ್ರತಿಕೃತಿ ದಹನ ದಿನ ಆಚರಣೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರು 1927ರ ಡಿ.25 ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥವಾಗಿ ನಗರದ ದಲಿತ ಮುಖಂಡರಿಂದ ಅಂಬೇಡ್ಕರ್ ಪ್ರತಿಮೆ ಎದುರು ಮನುಸ್ಮೃತಿ ಪ್ರತಿಕೃತಿ ದಹನ ದಿನ ಆಚರಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಪಿಂಟು ಕಾಂಬಳೆ ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ, ಮಾನವ ವಿರೋಧಿಯೂ ಆಗಿದೆ. ಅಂಬೇಡ್ಕರ್ ಅವರು ಪುಸ್ತಕಗಳನ್ನು ಅತಿ ಹೆಚ್ಚು ಪ್ರೀತಿಸುವವರು ಆದರೆ ಈ ಮನುಸ್ಮೃತಿಯ ಪುಸ್ತಕವನ್ನು ಸುಟ್ಟು ಹಾಕಿದ್ದರು. ಏಕೆಂದರೆ ಈ ದೇಶದ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ಅದರಲ್ಲಿ ಅಡಗಿದೆ ಎಂಬುದನ್ನು ಅರಿತಿದ್ದ ಅವರು ಅದನ್ನು ಬಹಿರಂಗವಾಗಿ ದಹಿಸಿದ್ದರು. ದೇಶ ಸ್ವತಂತ್ರಗೊಂಡಾಗ ಸಂವಿಧಾನ ಕೊಟ್ಟು ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದರು.
ದಲಿತ ಹಿರಿಯ ಮುಖಂಡರಾದ ನರಸಿಂಗ ಕಾಂಬಳೆ ರವರು ಅಂಬೇಡ್ಕರ್ ವೃತ್ತದಲ್ಲಿ ಮನುಸ್ಮೃತಿಯ ಪ್ರತಿಕೃತಿಗೆ ಪೆಟ್ರೋಲ್ ಸುರಿದು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವಾಯಿಸ್ ಆಫ್ ಅಂಬೇಡ್ಕರ್ ರಾಜ್ಯಾಧ್ಯಕ್ಷ ಸುರೇಶ ಮೋರೆ ಮಾತನಾಡಿ, ದೇಶದ ಜನರಿಗೆ ಅಸ್ಪೃಶ್ಯರೆಂಬ ಹಣೆಪಟ್ಟಿ ಕಟ್ಟಿ ಸಾವಿರಾರು ವರ್ಷಗಳಿಂದ ಪಶು–ಪಕ್ಷಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡ ಮನುಸ್ಮೃತಿಯನ್ನು ದಹಿಸಿ ಡಾ.ಅಂಬೇಡ್ಕರ್ ಪ್ರತಿಭಟಿಸಿದ್ದರು. ಇದೀಗ ನಾವು ಮನುಸ್ಮೃತಿಯ ಪ್ರತಿಕೃತಿ ದಹಿಸುವ ಮೂಲಕ ಮನುಸ್ಮೃತಿಯನ್ನು ಪೋಷಿಸಿಕೊಂಡು ಬರುತ್ತಿರುವ ಸಂಘ ಪರಿವಾರದ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದೇವೆ ಎಂದರು.
ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಶಂಕರ ಫುಲೆ ಮಾತನಾಡಿ, ಈಗ ನಾವು ಮನುಸ್ಮೃತಿ ಪ್ರತಿಕೃತಿ ದಹಿಸುವ ಮೂಲಕ ದೇಶದಲ್ಲಿ ಮುಂದೆ ಬ್ರಾಹ್ಮಣ್ಯಶಾಹಿ ಮನಸ್ಥಿತಿ ಬಿತ್ತಲು ಬಿಡುವುದಿಲ್ಲ ಎಂಬುದರ ಸಂಕೇತವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಸೇನೆ ಸಂಘಟನೆಯ ಅಧ್ಯಕ್ಷ ಸಂದೀಪ್ ಮುಕಿಂದೆ, ದತ್ತಾತ್ರೇಯ ಸೂರ್ಯವಂಶಿ, ದಶರಥ್ ಕೋಟಮಾಳೆ, ಝರನಾಥ್ ಮಾಲೆ, ರವೀಂದ್ರ ಸಿಂಗಾರೆ, ಅಂಬಾರಾಯ ಶೃಂಗೇರಿ, ನಿತ್ಯಾನಂದ್ ಮಂಠಾಳಕರ್, ಸಿಕಂದರ್ ಶಿಂಧೆ, ಘಾಳೆಪ್ಪಾ, ಚಂದ್ರಕಾಂತ್ ಮಂಠಾಳಕರ್, ವಿಜಯಕುಮಾರ್ ಡಾಂಗೆ, ಜೈಭೀಮ್ ಕೋಲೆ, ಸಾವನ್ ಗಾಯಕವಾಡ್, ಎಂ ಡಿ ರಫೀಕ್, ರಾಜೇಶ್ ಮೇತ್ರೆ, ಸಾಗರ್ ರಾಯಗೊಳ್ ಹಾಗೂ ದೇವೇಂದ್ರ ಅಟ್ಟೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.