ಬೀದರ್ | ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಆಚರಣೆ
ಬೀದರ್ : ಭಾರತ ಕಮ್ಯೂನಿಸ್ಟ ಪಕ್ಷ (CPI) ಯ 100ನೇ ವಾರ್ಷಿಕೋತ್ಸವವು ನಗರದ ಭಗತ್ ಸಿಂಗ್ ವೃತ್ತದ ಹತ್ತಿರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ AIKS ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ ಮಾತನಾಡಿ, ಕಾನಪುರ ಬೊಳ್ಸೆವಿಕ ಮತ್ತು ಮೀರತ್ ಪ್ರಕರಣಗಳಿಂದ ಬ್ರಿಟಿಷ್ ವಸಾಹತು ಸರಕಾರವು ಕಮ್ಯೂನಿಸ್ಟ್ ಪಾರ್ಟಿಯನ್ನು ಮುಗಿಸುವ ಪ್ರಯತ್ನ ಮಾಡಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಮುಂದೆ ಸಾಮೂಹಿಕ ಸಂಘಟನೆಗಳಾದ ಅಖಿಲ ಭಾರತ ಕಿಸಾನಸಭಾ, ಅಖಿಲ ಭಾರತ ಪ್ರಗತಿಪರ ಲೇಖಕರ ಸಂಘ, ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಬ್ರಿಟಿಷ್ ವಸಾಹತು ಸರಕಾರವು ಭಾರತ ಕಮ್ಯೂನಿಸ್ಟ್ ಪಕ್ಷವನ್ನು 1934 ರಿಂದ 1942ರ ವರೆಗೆ ನಿಷೇಧ ಹೇರಿತ್ತು. ನಂತರ ಬ್ರಿಟಿಷ್ ವಸಾಹತು ಸರ್ಕಾರ ಮತ್ತು ಭಾರತ ಸರ್ಕಾರವು ತೆಲಂಗಾಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷವನ್ನು 1946 ರಿಂದ 1951 ರವರೆಗೆ ನಿಷೇಧಿಸಿತ್ತು ಎಂದು ಪಕ್ಷದ ಇತಿಹಾಸದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲಿ ಅಹಮ್ಮದ್, ಎಂ ಡಿ ಶಫಾಯತ್ ಆಲಿ, ಶಿವರಾಜ್ ಕಮಠಾಣಾ, ಅಖಿಲ್ ಭಾರತ್ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಚೊಂಡಿ, ಪ್ರಭು ಹುಚಕನಳ್ಳಿ, ಪ್ರಭು ತಗಣಿಕರ್, ಚಂದೋಬಾ ಭೋಸ್ಲೆ ಹಾಗೂ ವೀರಶೆಟ್ಟಿ ಕುಂಬಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.