IPL | ಫೀನಿಕ್ಸ್ ನಂತೆ ಎದ್ದು ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡ ಆರ್ ಸಿ ಬಿ

Update: 2024-05-18 18:42 GMT

PHOTO : x@IPL

ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ ಪ್ರವೇಶಿಸಿತು.

ಮಾಡು ಇಲ್ಲವೇ ಮಡಿ ಎಂಬಂತಿದ್ದ ರೋಚಕ ಪಂದ್ಯದಲ್ಲಿ ಆರ್ ಸಿ ಬಿ ಯು, ಸಿಎಸ್‌ಕೆ ಸೋಲಿಸಿ ಐಪಿಎಲ್ ನಲ್ಲಿ ಫೀನಿಕ್ಸ್‌ನಂತೆ ಎದ್ದು 27 ರನ್‌ ಗಳ ಜಯಭೇರಿ ಬಾರಿಸಿತು. ಚೆನ್ನೈಗೆ ಪ್ಲೇ ಆಫ್‌ಗೆ ತೇರ್ಗಡೆಯಾಗಲು 6 ಎಸೆತಗಳಲ್ಲಿ 17 ರನ್ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನಲ್ಲಿ 7 ರನ್ ಗಳಿಸಿ ಪ್ಲೇ ಆಫ್ ಸುತ್ತಿಗೇರುವುದರಿಂದ ವಂಚಿತವಾಯಿತು.

ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟನ್ನು ಕಳೆದುಕೊಂಡ ಸಿಎಸ್‌ಕೆ ಆಘಾತಕಾರಿ ಆರಂಭ ಪಡೆದಿತ್ತು. ರಚಿನ್ ರವೀಂದ್ರ(61 ರನ್, 37 ಎಸೆತ, 5 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ರವೀಂದ್ರ ಜಡೇಜ(ಔಟಾಗದೆ 42 ರನ್, 22 ಎಸೆತ, 3 ಬೌಂಡರಿ, 3 ಸಿಕ್ಸರ್), ಅಜಿಂಕ್ಯ ರಹಾನೆ(33 ರನ್), ಹಾಗೂ ಧೋನಿ(25 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡ ನಾಯಕ ಎಫ್‌ಡು ಪ್ಲೆಸಿಸ್(54 ರನ್, 39 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (47 ರನ್, 29 ಎಸೆತ, 3 ಬೌಂಡರಿ, 4 ಸಿಕ್ಸರ್)ಉತ್ತಮ ಆರಂಭದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಕೊಹ್ಲಿ ಹಾಗೂ ಪ್ಲೆಸಿಸ್ 9.4 ಓವರ್‌ಗಳಲ್ಲಿ 78 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆರ್‌ಸಿಬಿ 3 ಓವರ್‌ಗಳಲ್ಲಿ 31 ರನ್ ಗಳಿಸಿದ್ದಾಗ ಮಳೆ ಆಗಮಿಸಿ ಪಂದ್ಯಕ್ಕೆ ಅಡ್ಡಿಯಾಯಿತು. ಮಳೆ ನಿಂತ ಮೇಲೆ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಕೇವಲ 3 ರನ್‌ನಿಂದ ಅರ್ಧಶತಕ ವಂಚಿತರಾಗಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.

ಕೊಹ್ಲಿ ನಿರ್ಗಮನದ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಜತ್ ಪಾಟಿದಾರ್(41 ರನ್, 23 ಎಸೆತ, 2 ಬೌಂಡರಿ, 4 ಸಿಕ್ಸರ್) ಜೊತೆಗೆ ಪ್ಲೆಸಿಸ್ 2ನೇ ವಿಕೆಟ್‌ಗೆ 35 ರನ್ ಸೇರಿಸಿದರು. ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಪ್ಲೆಸಿಸ್ ರನೌಟಾದರು. ಆಗ ಕ್ಯಾಮರೂನ್ ಗ್ರೀನ್(ಔಟಾಗದೆ 38, 17 ಎಸೆತ, 3 ಬೌಂಡರಿ, 3 ಸಿಕ್ಸರ್)ಜೊತೆ ಕೈಜೋಡಿಸಿದ ಪಾಟಿದಾರ್ 3ನೇ ವಿಕೆಟ್‌ಗೆ ಕೇವಲ 28 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್(16 ರನ್, 5 ಎಸೆತ)ಹಾಗೂ ದಿನೇಶ್ ಕಾರ್ತಿಕ್ (14 ರನ್, 6 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಸಿಎಸ್‌ಕೆ ಪರ ಶಾರ್ದೂಲ್ ಠಾಕೂರ್ 4 ಓವರ್‌ಗಳಲ್ಲಿ 61 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರೂ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 218/5

(ಎಫ್ ಡು ಪ್ಲೆಸಿಸ್ 54, ವಿರಾಟ್ ಕೊಹ್ಲಿ 47, ರಜತ್ ಪಾಟಿದಾರ್ 41, ಕ್ಯಾಮರೂನ್ ಗ್ರೀನ್ ಔಟಾಗದೆ 38, ಶಾರ್ದೂಲ್ ಠಾಕೂರ್ 2-61)

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 191/7

(ರಚಿನ್ ರವೀಂದ್ರ 62, ಅಜಿಂಕ್ಯ ರಹಾನೆ 33, ರವೀಂದ್ರ ಜಡೇಜ ಔಟಾಗದೆ 42, ಎಂ.ಎಸ್. ಧೋನಿ 25, ಗ್ರೀನ್ 1-18, ಮ್ಯಾಕ್ಸ್‌ವೆಲ್ 1-25, ಸಿರಾಜ್ 1-35, ಯಶ್ ದಯಾಳ್ 2-42)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News