ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ, ಆತಂಕಪಡುವ ಅಗತ್ಯವಿಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು: "ನಮ್ಮ ಸರಕಾರ ಇರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೆ ಮತ್ತೆ ನೀಡುತ್ತೇವೆ. ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಯ ನೀಡಿದರು.
ಬುಧವಾರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರಕಾರ ಕೆಲವು ಮಾನದಂಡ ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುವುದು. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಕೆಲವು ಕಡೆ ಹೆಚ್ಚುಕಮ್ಮಿಯಾಗಿದ್ದು, ಎಲ್ಲವನ್ನು ಬಗೆಹರಿಸುತ್ತೇವೆ. ದಯಮಾಡಿ ಸಹಕಾರ ನೀಡಿ. ಸರಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದರು.
ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಣೆಯಿಂದ ರೈತರಿಗೆ ನೆರವು:
ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿರುವ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳು ಹಾಲಿನ ವಿಚಾರವಾಗಿ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಿಸಲು ತೆರಳುತ್ತಿದ್ದಾರೆ. ನಾನು ಕೂಡ ಇದಕ್ಕೆ ತೆರಳಬೇಕಾಗಿತ್ತು. ಆದರೆ ನಾಳೆ ಮೀನುಗಾರರ ದಿನ ಕಾರ್ಯಕ್ರಮ ಇರುವುದರಿಂದ ನಾನು ಮುರುಡೇಶ್ವರಕ್ಕೆ ತೆರಳುತ್ತಿದ್ದೇನೆ. ನಂದಿನಿ ಹಾಲಿಗೆ ಮಾರುಕಟ್ಟೆ ವಿಸ್ತರಣೆ ಮಾಡಿದರೆ ನಮ್ಮ ರೈತರಿಗೆ ನೆರವಾಗುತ್ತದೆ. ಹೀಗಾಗಿ ಈ ಭೇಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.