ರಾಜ್ಯದಲ್ಲಿ ಮೂರು ಗ್ಲೋಬಲ್ ಇನ್ನೊವೇಷನ್ ಜಿಲ್ಲೆಗಳ ಸ್ಥಾಪನೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವು ದೇಶದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ (ಜಿಸಿಸಿ) ನೀತಿಯನ್ನು ಜಾರಿಗೆ ತಂದಿದೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ (ಗ್ಲೋಬಲ್ ಇನ್ನೋವೇಶನ್) ಜಿಲ್ಲೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ನಗರದ ಅರಮನೆ ಆವರಣದಲ್ಲಿ ‘ಬೆಂಗಳೂರು ಟೆಕ್ ಸಮ್ಮಿಟ್-2024’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಸ್ಥಾಪಿಸಲಿರುವ ಈ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳು ಜಿಸಿಸಿಗಳಿಗೆ ತಮ್ಮ ಕೇಂದ್ರಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಲು ಅನುವು ಮಾಡಿಕೊಡಲಿವೆ ಎಂದು ಹೇಳಿದರು.
ನಾವೀನ್ಯತೆ, ತಂತ್ರಜ್ಞಾನದ ಪ್ರಗತಿ ಮತ್ತು ಜಾಗತಿಕ ಸಹಯೋಗಕ್ಕಾಗಿ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ. 20ನೇ ಶತಮಾನದ ಆರಂಭದಲ್ಲಿ, ಬೆಂಗಳೂರು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯ ಕೇಂದ್ರವಾಗಿ ಬೆಳೆಯಿತು. 2000 ಇಸವಿಯ ಆರಂಭದಲ್ಲಿ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ ಪಾರ್ಕ್ ಪ್ರಾರಂಭಿಸುವ ಮೂಲಕ ಬೆಂಗಳೂರು ಪರಿವರ್ತನೆಯ ಕಡೆಗೆ ಹೊರಳಿತು ಎಂದು ಅವರು ಸ್ಮರಿಸಿದರು.
ಸಾಫ್ಟ್ ವೇರ್, ಬಯೋ ಟೆಕ್ನಾಲಜಿ, ಏರೋಸ್ಪೇಸ್ ಹಾಗೂ ಅಭಿವೃದ್ಧಿಗೊಂಡ ಉತ್ಪಾದನೆಯಲ್ಲಿ ತನ್ನ ಪ್ರಭಾವಕ್ಕಾಗಿ ಬೆಂಗಳೂರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ತನ್ನನ್ನು ಸ್ಥಾಪಿಸಿಕೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ ಭಾಗವಾಗಿರಲಿದೆ(ಕ್ವಿನ್ ಸಿಟಿ). ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಮೈಕ್ರೋ ಸಾಫ್ಟ್, ಇಂಟೆಲ್, ಆಕ್ಸೆಂಚರ್, ಐ.ಬಿ.ಎಂ ಮತ್ತು ಬಿಎಫ್ಎಸ್ ಕಾಂಸಾರ್ಟಿಯಂ ಜೊತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತ ಗೊಳಿಸಲಿದೆ. ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಯಾಂಡ್ ಬೆಂಗಳೂರು ಕಾರ್ಯಕ್ರಮಗಳ ಮೂಲಕ ಬೆಳವಣಿಗೆಯ ಸೌಲಭ್ಯಗಳನ್ನು ಟೆಕ್ ವಲಯದಿಂದಾಚೆಗೂ ಕೊಂಡೊಯ್ಯುವುದರಲ್ಲಿ ನಮಗೆ ನಂಬಿಕೆಯಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನ, ವಿದ್ಯಾರ್ಥಿಗಳಿಗೆ ಇ-ಶಿಕ್ಷಣದ ಸುಧಾರಣೆ ಮತ್ತು ಎಲ್ಲ ನಾಗರಿಕ ಸೇವೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
2022ರಿಂದ 2023 ರವರೆಗೆ ಶೇ.18.2ರಷ್ಟು ಏರಿಕೆಯನ್ನು ಕಂಡಿರುವ ಕರ್ನಾಟಕದ ಸ್ಟಾರ್ಟ್ ಅಪ್ ಪರಿಸರ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಒಟ್ಟು 3,036 ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ಕರ್ನಾಟಕವು ಭಾರತದ ಒಟ್ಟು ಸ್ಟಾರ್ಟ್ ಅಪ್ ಗಳಲ್ಲಿ ಶೇ.8.7ರಷ್ಟು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಈ ಯಶಸ್ಸು ಉದ್ಯಮಿಗಳಿಗೆ ನಮ್ಮ ಬೆಂಬಲ ಮತ್ತು ವೈವಿಧ್ಯಮಯ ಅವಕಾಶಗಳನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುವುದು. ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸಧೃಢಗೊಳಿಸುತ್ತದೆ. ಅಲ್ಲದೇ, ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲಿದೆ ಎಂದು ಅವರು ಹೇಳಿದರು.
ಜಿಸಿಸಿ ನೀತಿ ಅನಾವರಣ:
ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಈಗ ಇರುವ 875 ಜಿಸಿಸಿ ಘಟಕಗಳ ಜೊತೆಗೆ ಇನ್ನೂ 500 ಜಿಸಿಸಿ ಘಟಕಗಳ ಸ್ಥಾಪನೆ, 3.5 ಲಕ್ಷ ಉದ್ಯೋಗಗಳ ಸೃಷ್ಟಿ ಹಾಗೂ ಆರ್ಥಿಕ ಉತ್ಪಾದನೆಯನ್ನು 50 ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸುವ ಗುರಿಯನ್ನು “ಜಿಸಿಸಿ ಕಾರ್ಯನೀತಿ” ಹೊಂದಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಮಂಗಳೂರನ್ನು ಫಿನ್ ಟೆಕ್ ವಲಯವನ್ನಾಗಿ, ಹುಬ್ಬಳ್ಳಿ-ಧಾರವಾಡ ಇವಿ ವಲಯವನ್ನಾಗಿ ಹಾಗೂ ಮೈಸೂರನ್ನು ಡ್ರೋನ್ ವಲಯವನ್ನಾಗಿ ರೂಪಿಸಲು ಸರಕಾರ ಒತ್ತು ನೀಡಲಿದೆ. ನಾವೀನ್ಯತೆ, ಸುಸ್ಥಿರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಸರಕಾರ ಬದ್ಧವಾಗಿದ್ದು, ಉದ್ಯಮದ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಅವರು ನುಡಿದರು.
ಫ್ರಾನ್ಸ್ ದೇಶದ ಪ್ಯಾರಿಸ್ ವಲಯದ ಆರ್ಥಿಕ ಅಭಿವೃದ್ಧಿ, ನಾವೀನ್ಯತೆ ಇಲಾಖೆಯ ಉಪಾಧ್ಯಕ್ಷೆ ಅಲೆಕ್ಸಾಂಡ್ರಾ ಡಬ್ಲಾಂಚೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಟೆಕ್ಸಸ್ ಇನ್ಟ್ರುಮೆಂಟ್ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿಯ ಸಹಸ್ಥಾಪಕ ಶ್ರೀಹರ್ಷ ಮಜೇತಿ ಅವರನ್ನು ಸನ್ಮಾನಿಸಲಾಯಿತು.
ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಶಾಸಕ ರಿಝ್ವಾನ್ ಅರ್ಶದ್, ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಐಟಿ ಬಿಟಿ ನಿರ್ದೇಶಕ ದರ್ಶನ್, ಉಪ ಕಾರ್ಯದರ್ಶಿ ರುಚಿ ಬಿಂದಲ್ ಮತ್ತಿತರರು ಇದ್ದರು.