ರೈತರ ಸಾಲಮನ್ನಾಕ್ಕೆ ತಿರಸ್ಕರಿಸಿದ ಕೇಂದ್ರ, ಶ್ರೀಮಂತರ ಸಾಲಮನ್ನಾ ಮಾಡಿದ್ದು ಘೋರ ಅನ್ಯಾಯ : ಕೆ.ಎನ್.ರಾಜಣ್ಣ
ಬೆಂಗಳೂರು: ರೈತರ ಸಾಲಮನ್ನಾ ಮಾಡಬೇಕೆಂದು ರಾಜ್ಯ ಸರಕಾರ ಮನವಿ ಮಾಡಿದಾಗ ಆರ್ಥಿಕವಾಗಿ ದೇಶ ದಿವಾಳಿಯಾಗುತ್ತದೆ ಎಂದು ಹೇಳಿ ತಿರಸ್ಕರಿಸಿದ ಕೇಂದ್ರ ಸರಕಾರ, ಶ್ರೀಮಂತರ ಮತ್ತು ಕಾರ್ಪೊರೇಟ್ ಸಂಸ್ಥೆಗಳ 14 ಲಕ್ಷ ಕೋಟಿ ರೂ.ಗಳ ಬೃಹತ್ ಮಟ್ಟದ ಸಾಲವನ್ನು ಮನ್ನಾ ಮಾಡಿದ್ದು ದೇಶದ ಬಡವರಿಗೆ ಎಸಗಿದ ಘೋರ ಅನ್ಯಾಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ಗಳವರೆಗೂ ಸಾಲಮನ್ನಾ ಮಾಡಲಾಗಿತ್ತು. 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 50 ಸಾವಿರ ರೂ.ಗಳವರೆಗೂ, 2018ರ ನಂತರ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ 1 ಲಕ್ಷ ರೂ.ವರೆಗೂ ಕೃಷಿ ಸಾಲ ಮನ್ನಾ ಮಾಡಿದ್ದರು ಎಂದರು.
ಕೇಂದ್ರ ಸರಕಾರ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 3.70 ಲಕ್ಷ ರೂ. ನೆರವನ್ನು ನೀಡಿ, ಮತ್ತೊಂದು ಕಡೆ ಇದೇ ಯೋಜನೆಯಿಂದ ಶೇ.28 ರಷ್ಟು ಜಿಎಸ್‍ಟಿ ಕಡಿತ ಮಾಡುವ ಮೂಲಕ ಈ ಕೈಲಿ ಕೊಟ್ಟು, ಆ ಕೈಲಿ ಕಿತ್ತುಕೊಳ್ಳುತ್ತಿದೆ ಎಂದು ಕೆ.ಎನ್.ರಾಜಣ್ಣ ಟೀಕಿಸಿದರು.
ಜಿಎಸ್‍ಟಿಯಲ್ಲಿ ರಾಜ್ಯಕ್ಕೆ ಅನ್ಯಾಯ: ರೈತರ ವಿಚಾರ ಬಂದಾಗ ಆರ್ಥಿಕ ದಿವಾಳಿಯಾಗುತ್ತದೆ ಎಂದು ಹೇಳುವ ಕೇಂದ್ರ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಕಡಿತ ಮಾಡಿದೆ. ಸಹಕಾರ ಕ್ಷೇತ್ರದ ಸೆಸ್ ಕಡಿಮೆ ಮಾಡಲು ಹಿಂದೇಟು ಹಾಕಿದೆ. ಜಿಎಸ್‍ಟಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.