ಚಾಮರಾಜನಗರ | ನಾಡ ಬಾಂಬ್ ಇಟ್ಟು ಪ್ರಾಣಿಗಳ ಹತ್ಯೆ : ಇಬ್ಬರ ಬಂಧನ

Update: 2025-02-25 18:03 IST
ಚಾಮರಾಜನಗರ | ನಾಡ ಬಾಂಬ್ ಇಟ್ಟು ಪ್ರಾಣಿಗಳ ಹತ್ಯೆ : ಇಬ್ಬರ ಬಂಧನ
  • whatsapp icon

ಚಾಮರಾಜನಗರ : ಕಾಡುಹಂದಿಗಳನ್ನು ಬೇಟೆಯಾಡಲು ನಾಡ ಬಾಂಬ್ ಇಟ್ಟು ಜಾನುವಾರುಗಳ ಹತ್ಯೆಗೆ ಕಾರಣರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಹಂದಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ಸ್ಪೋಟಕ ಗುಂಡುಗಳನ್ನು ತಯಾರಿಸಿ ಜೋಳದ ಸಂಡು ಹಾಗೂ ಮೇವಿನ ಜೊತೆ ಜಮೀನು ಹಾಗೂ ಕೆಲವು ಖಾಲಿ ಜಾಗದಲ್ಲಿ ಇಡುತ್ತಿದ್ದರು. ಮೇವನ್ನು ಅರಸಿ ಬರುವ ಜಾನುವಾರುಗಳು ಇವುಗಳನ್ನು ಮೇವು ಎಂದು ತಿನ್ನುವ ಸಮಯದಲ್ಲಿ ಗುಂಡುಗಳನ್ನು ಕಚ್ಚಿದಾಗ ಅವುಗಳು ಸ್ಪೋಟಗೊಂಡು ಜಾನುವಾರುಗಳ ಬಾಯಿ ಹಾಗೂ ಮುಖ ಛಿದ್ರವಾಗಿ ಗಾಯಗೊಂಡು ಮೃತಪಟ್ಟಿರುವ ಬಗ್ಗೆ 4 ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

ಕುಣಗಳ್ಳಿ ಗ್ರಾಮದ ರಾಮಶೆಟ್ಟಿ(45), ಸೋಮಣ್ಣ(45) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಮೂವರು ಆರೋಪಿಗಳ ಹೆಸರನ್ನು ಬಂಧಿತ ಆರೋಪಿಗಳು ಹೇಳಿದ್ದು ಅವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೂ ಕ್ರಮವಹಿಸಲಾಗಿದೆ ಎಂದರು.

ಫೆ.19ರಂದು ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ಸ್ಫೋಟಕ ಗುಂಡು ಕಚ್ಚಿ ಹಸುವಿನ ಬಾಯಿ ಛಿದ್ರವಾಗಿ ಆ ಹಸು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 34 ಜೀವಂತ ಸ್ಪೋಟಕ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ, ರಾಮಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪಿ.ಎನ್.ಶೇಷಾದ್ರಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News