ಚಾಮರಾಜನಗರ | ಸಹೋದರಿಯನ್ನು ಕೊಲೆಗೈದು, ತಂದೆ, ಅತ್ತಿಗೆಗೆ ಚಾಕುವಿನಿಂದ ಇರಿದ ಯುವಕ
ಚಾಮರಾಜನಗರ: ಕ್ಷುಲ್ಲಕ ಕಾರಣ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನು ಚಾಕುವಿನಿಂದ ಇರಿದು ಕೊಲೆಗೈದು ತಂದೆ, ಅತ್ತಿಗೆ ಮೇಲೂ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಸೈಯದ್ ಎಂಬವರ ಪುತ್ರಿ ಐಮಾನ್ ಬಾನು(26) ಕೊಲೆಯಾದವರು.
ಫರ್ಮಾನ್ ಪಾಶಾ ಕೊಲೆ ಆರೋಪಿಯಾಗಿದ್ದು, ಕೊಳ್ಳೇಗಾಲ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯು ತಂದೆ ಸೈಯದ್(60) ಮತ್ತು ಅತ್ತಿಗೆ ತಸ್ಲೀಮಾ ತಾಜ್(25) ಎಂಬವರಿಗೂ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅವರು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ಫರ್ಮಾನ್ ಪಾಶಾ ತನ್ನ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಸಹೋದರಿ ಐಮಾನ್ ಬಾನು, ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ಏಕೆ ತಿನ್ನಿಸುತ್ತಿದ್ದಿಯಾ ಎಂದು ಆಕ್ಷೇಪಿಸಿದ್ದಾರೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆರೋಪಿ ಫರ್ಮಾನ್ ಪಾಶಾ ತಂಗಿ ಐಮಾನ್ ಅವರಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ತಡೆಯಲೆತ್ನಿಸಿದ ತಂದೆ ಸೈಯದ್ ಮತ್ತು ಅತ್ತಿಗೆ ತಸ್ಲೀಮಾರಿಗೂ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.