ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ : ಸಿಎಂ ಸಿದ್ದರಾಮಯ್ಯ ಘೋಷಣೆ

Update: 2025-04-24 19:26 IST
ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ : ಸಿಎಂ ಸಿದ್ದರಾಮಯ್ಯ ಘೋಷಣೆ
  • whatsapp icon

ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ: ಸಿಎಂ ಸಿದ್ದರಾಮಯ್ಯ ಘೋಷಣೆ

ಚಾಮರಾಜನಗರ : ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಇಲ್ಲಿಯವರೆಗೂ ಮಹದೇಶ್ವರ ಬೆಟ್ಟದಲ್ಲಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾರಾಟ ಮುಕ್ತ ಇತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಹಾಕಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಹಿಂದಿನ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಒಂದೂವರೆ ವರ್ಷದಿಂದ ಜಾರಿ ಆಗದೇ ಇರುವುದಕ್ಕೆ ಮುಖ್ಯಮಂತ್ರಿಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ತೀವ್ರವಾಗಿ ಪ್ರಶ್ನಿಸಿದರು.

ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ಸೂಕ್ತವಾಗಿ, ವೇಗವಾಗಿ ನಡೆಯಲು ಒಬ್ಬ ಎ.ಇ.ಇ ಯನ್ನು ಪ್ರಾಧಿಕಾರಕ್ಕೇ ನೇಮಿಸಲು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಅವರಿಗೆ ಸೂಚಿಸಿದರು.

ಹಿಂದಿನ ಸಭೆಯ ನಿರ್ಣಯದಂತೆ ಪ್ರವಾಸಿಗರ ಶೆಲ್ಟರ್ ಮತ್ತು ಶೌಚಾಲಯಗಳ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಸಿಎಂ ತರಾಟೆಗೆ ತೆಗೆದುಕೊಂಡರು.

ಪ್ರಾಧಿಕಾರ ಮತ್ತು ಮಹದೇಶ್ವರ ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ಒದಗಿಸಿ ಸ್ಥಳಾಂತರಿಸುವ ಮತ್ತು ಉಳಿದಿರುವವರನ್ನು ಹಾಗೇ ಉಳಿಸಿ, ಹೊಸದಾಗಿ ವಾಣಿಜ್ಯ ಉದ್ದೇಶದ ನಿರ್ಮಾಣಗಳಿಗೆ ಅವಕಾಶ ಆಗದಂತೆ ಖಚಿತವಾಗಿ ತಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುವುದನ್ನು ಸಂಪೂರ್ಣ ತಡೆಯಬೇಕು. ಚಾಳಿ ಬಿದ್ದ ಆರೋಪಿಯೊಬ್ಬ ಗಡಿಪಾರು ಆದರೂ ಅಕ್ರಮ ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳಿಂದ ತಿಳಿದ ಮುಖ್ಯಮಂತ್ರಿಗಳು ಅವರನ್ನು ತಕ್ಷಣ ಕಠಿಣ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷ ವೆಚ್ಚದಲ್ಲಿ, ಒಟ್ಟು 12-13 ಕೋಟಿ ವೆಚ್ಚದಲ್ಲಿ ಆದಷ್ಟು ಬೇಗ ನೂತನ ಮನೆ ಕಟ್ಟಿ ಕೊಡಲು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ಲಾಡುಗೆ , ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ, ಪ್ರಸಾದದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದು. ಮುಂದಿನ ದಿನಗಳಲ್ಲಿ 100 ಗ್ರಾಂ ತೂಕದ ಪ್ರಸಾದ ಲಾಡುವನ್ನು ಕೇವಲ 35 ರೂಪಾಯಿಗೆ ವಿತರಿಸುವ ಬಗ್ಗೆ ಸಭೆ ನಿರ್ಣಯಿಸಿತು.

ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣ ಮೂರ್ತಿ, ಎಂ.ಆರ್.ಮಂಜುನಾಥ್, ಡಾ.ಡಿ.ತಿಮ್ಮಯ್ಯ,ಉನ್ನತ ಅಧಿಕಾರಿಗಳಾದ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕಧಿಕಾರಿಗಳಾದ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಬಿ.ಟಿ.ಕವಿತಾ,ಪ್ರಾಧಿಕಾರದ ಸದಸ್ಯರು ಸಹಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News