ಮತದಾರರ ಪಟ್ಟಿ ಪರಿಷ್ಕರಣೆ| ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,62,998 ಮತದಾರರು: ಡಿಸಿ ಮೀನಾ

Update: 2024-01-22 17:43 GMT

ಚಿಕ್ಕಮಗಳೂರು: ಜಿಲ್ಲೆಯ 5 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು 9,62,998 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮೀನಾ ನಾಗರಾಜ್ ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2024ರ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸೋಮವಾರ ಜಿಲ್ಲಾಧಿಕಾರಿ ಕಚಢರಿಯ ನ್ಯಾಯಾಲಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಸೋಮವಾರ ಜಿಲ್ಲೆಯಲ್ಲಿರುವ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 4,89,590 ಮಹಿಳಾ ಮತದಾರರು, 4,73,377 ಪುರುಷ ಮತದಾರರು ಹಾಗೂ 31 ಇತರ ಮತದಾರರು ಸೇರಿ ಒಟ್ಟು 9,62,998 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಪುರಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.

ಮತದಾರರು ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು, ತಂದೆಯ ಹೆಸರು, ಸಂಬಂಧ, ಲಿಂಗ, ಜನ್ಮ, ದಿನಾಂಕ ಮತ್ತು ಪೊಟೊ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಯವರ ವೆಬ್ ಸೈಟ್ www.ceokarnataka.kar.nic.in ನಲ್ಲಿಯೂ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದ ಅವರು, ಸಾರ್ವಜನಿಕರು, ಮತದಾರರು ಯಾವುದೇ ಕಚೇರಿಗೆ ಹೋಗದೆ ಅವರಿರುವ ಸ್ಥಳದಿಂದಲೇ webportal-voters.eci.gov.in, voter Helpline Mobile App ಹಾಗೂ 1950 voter Helpline ಮುಖಾಂತರ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಪರಿಶೀಲಿಸಿ ಆಗಿರುವ ತಪ್ಪುಗಳಿಗೆ ಸಂಬಂಧಪಟ್ಟ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

18 ವರ್ಷ ತುಂಬಿದ ಅರ್ಹ ಯುವ ಮತದಾರರ ಸೇರ್ಪಡೆಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾಲೇಜುಗಳಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಜಾಗೃತಿ ಮೂಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಉಪವಿಭಾಗಾಧಿಕಾರಿ ಬಲ್ಜಿತ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News