ಅಕ್ಕಿ ಮೂಟೆಗಳ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ ಪ್ರಕರಣ: 3 ಅಂಗಡಿಗಳ ಮಾಲಕರಿಗೆ 60 ಸಾವಿರ ರೂ. ದಂಡ ವಿಧಿಸಿದ ಅಧಿಕಾರಿಗಳು
ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆ, ಕೆಎಂ ರಸ್ತೆ ಸೇರಿದಂತೆ ವಿವಿಧ‘ ಭಾಗದಲ್ಲಿರುವ ಅಕ್ಕಿ ವ್ಯಾಪಾರಿಗಳು ಅಕ್ಕಿ ಮೂಟೆಗಳ ತೂಕದಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ 2023ರ ಡಿಸೆಂಬರ್ ತಿಂಗಳಲ್ಲಿ ‘ವಾರ್ತಾಭಾರತಿ’ ವರದಿ ಪ್ರಕಟಿಸಿದ್ದು, ಈ ವರದಿ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಶಿಫಾರಸಿನ ಮೇರೆಗೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಗರದಲ್ಲಿರುವ ಕೆಲ ಅಕ್ಕಿ ವ್ಯಾಪಾರಿಗಳ ಅಂಗಡಿ, ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದು, ತೂಕದಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ಕೆಲ ಅಂಗಡಿಗಳ ಮಾಲಕರಿಗೆ ದಂಡವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಡಿ.12ರಂದು ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ‘ಅಕ್ಕಿ ವ್ಯಾಪಾರಿಗಳಿಂದ ಗ್ರಾಹಕರ ಹಗಲು ದರೋಡೆ ಆರೋಪ’ ತಲೆ ಬರಹದಡಿಯಲ್ಲಿ ಅಕ್ಕಿ ವ್ಯಾಪಾರಿಗಳು ಅಕ್ಕಿ ಮೂಟೆಗಳ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಂಜಯ್ ಅವರು, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗೆ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕೆಲವು ದಿನಗಳ ಹಿಂದೆ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮತ್ತು ಸಿಬ್ಬಂದಿ ನಗರದ ಮಾರ್ಕೆಟ್ ರಸ್ತೆ, ಕೆ.ಎಂ. ರಸ್ತೆಗಳಲ್ಲಿರುವ ಅಕ್ಕಿ ವ್ಯಾಪಾರಿಗಳ ಕೆಲವು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು.
ದಾಳಿ ವೇಳೆ ಕೆಲವು ಅಕ್ಕಿ ವ್ಯಾಪಾರಿಗಳ ಅಂಗಡಿಗಳಲ್ಲಿ ಜೋಡಿಸಿಟ್ಟಿದ್ದ ಅಕ್ಕಿ ಮೂಟೆಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಇಂತಹ ಮೂರು ಅಂಗಡಿಗಳ ಮಾಲಕರಿಗೆ ಎಚ್ಚರಿಕೆ ನೀಡಿದ್ದಲ್ಲದೆ ಒಟ್ಟು 60 ಸಾವಿರ ರೂ. ದಂಡ ವಿಧಿಸಿದ್ದಾರೆ. ದಾಳಿ ನಡೆಸಿ, ದಂಡ ವಿಧಿಸಿರುವ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ‘ವಾರ್ತಾಭಾರತಿ’ಗೆ ಖುದ್ದು ಮಾಹಿತಿ ನೀಡಿದ್ದು, ಇಂತಹ ವಂಚನೆಗಳ ಬಗ್ಗೆ ಗ್ರಾಹಕರು ಇಲಾಖೆಗೆ ದೂರು ನೀಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಕಿ ವ್ಯಾಪಾರಿಗಳು ಅಕ್ಕಿ ಮೂಟೆಗಳ ತೂಕದಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿ ತೂಕ ಮತ್ತು ಅಳತೆ ಇಲಾಖಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದೆ. ಅಧಿಕಾರಿಗಳು ಇಂತಹ ಅಕ್ಕಿ ವ್ಯಾಪಾರಿಗಳ ಅಂಗಡಿಗಳ ದಾಳಿ ಮಾಡಿ ವಂಚನೆ ಮಾಡುತ್ತಿದ್ದ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದಾರೆ.
ಸಂಜಯ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ
ನಗರದಲ್ಲಿರುವ ಕೆಲವು ಅಕ್ಕಿ ವ್ಯಾಪಾರಿಗಳು ಅಕ್ಕಿ ಚೀಲಗಳ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಇತ್ತೀಚೆಗೆ ಕೆಲವು ಅಂಗಡಿಗಳ ಮೇಲೆ ದಿಢೀರ್ ಮಾಡಿದ್ದೇವೆ. ಕೆಲವು ವ್ಯಾಪಾರಿಗಳು ವಂಚನೆ ಮಾಡುತ್ತಿರುವುದು ದಾಳಿ ವೇಳೆ ಕಂಡು ಬಂದಿದ್ದರಿಂದ ಇಂತಹ ಅಕ್ಕಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಮೂರು ಅಂಗಡಿಗಳಲ್ಲಿ ವಂಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ಅಂಗಡಿ ಮಾಲಕರಿಗೆ ಒಟ್ಟು 60 ಸಾವಿರ ರೂ. ದಂಡ ವಿಧಿಸಲಾಗಿದೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು. ಗುಣಮಟ್ಟದ ವಸ್ತುಗಳನ್ನು ಪರಿಶೀಲಿಸಿ ಖರೀದಿ ಮಾಡಬೇಕು. ಗುಣಮಟ್ಟ ತೂಕ, ಅಳತೆಯಲ್ಲಿ ಮೋಸ ಆಗುತ್ತಿರುವುದು ಕಂಡು ಬಂದರೆ ಲಿಖಿತವಾಗಿ ದೂರು ನೀಡಿದಲ್ಲಿ ಸಂಬಂಧಿಸಿದ ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಶ್ರೀನಿವಾಸ್, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ, ಚಿಕ್ಕಮಗಳೂರು