ವಕೀಲನ ಮೇಲೆ ಹಲ್ಲೆ: ಬಾರ್ ಕೌನ್ಸಿಲ್ ಅಧ್ಯಕ್ಷರ ನೇತೃತ್ವದಲ್ಲಿ ಧರಣಿ

Update: 2023-12-01 18:13 GMT

ಚಿಕ್ಕಮಗಳೂರು: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿದ ಆರೋಪದಡಿಯಲ್ಲಿ ವಕೀಲ ಪ್ರೀತಮ್ ಎಂಬವರ ಮೇಲೆ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿ ಹಲ್ಲೆ ನಡೆಸಿದ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಮುಖಂಡರು, ಸದಸ್ಯರು ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದಲ್ಲಿ ನಗರದಲ್ಲಿ ಧರಣಿ ನಡೆಸಿದರು.

ಯುವ ವಕೀಲ ಪ್ರೀತಮ್ ಮೇಲಿನ ಹಲ್ಲೆಯನ್ನು ಖಂಡಿಸಿ ಶುಕ್ರವಾರ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದ ವಕೀಲರು ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಆಜಾದ್‍ಪಾರ್ಕ್ ವೃತ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು. ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ವಕೀಲರು ವಕೀಲನ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಬಂಧನವಾಗದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಧರಣಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಧರಣಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ಸುಬ್ಬರೆಡ್ಡಿ ಮಾತನಾಡಿ, ಹೆಲ್ಮೆಟ್ ಧರಿಸದೆ ಬೈಕ್ ಓಡಿಸಲಾಗುತ್ತಿದೆ ಎಂಬ ಕ್ಷುಲಕ ಕಾರಣಕ್ಕೆ ಯುವ ವಕೀಲ ಪ್ರೀತಮ್ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆನಡೆಸುವ ಮೂಲಕ ಇಡೀ ವಕೀಲ ಸಮೂಹವನ್ನು ಅವಮಾನ ಮಾಡಲಾಗಿದೆ. ನ್ಯಾಯದ ಪರವಾಗಿ ನಿಲ್ಲಬೇಕಾದ ಪೊಲೀಸರು ಇಂತಹ ಕೃತ್ಯ ನಡೆಸಿರುವುದು ಅತ್ಯಂತ ಖಂಡನೀಯ. ವಕೀಲರು ದಿನನಿತ್ಯ ತಮ್ಮ ಕಕ್ಷಿದಾರರ ಪರವಾಗಿ ಹೋರಾಟ ಮಾಡುತ್ತಾರೆ, ನ್ಯಾಯಕ್ಕಾಗಿ ಹೋರಾಡುತ್ತಾರೆ, ಇಂತಹ ವಕೀಲರ ಮೇಲೆ ಹಲ್ಲೆ ನಡೆಸಿರುವುದನ್ನು ನೋಡಿದರೇ ದೇಶದಲ್ಲಿ ಕಾನೂನು ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಹೆಲ್ಮಟ್ ವಿಚಾರವಾಗಿ ಇಂತಹ ಮಾರಣಾಂತಿಕ ಹಲ್ಲೆಯನ್ನು ನಡೆಸಲಾಗಿದೆ. ವಕೀಲ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದರೇ ಅಲ್ಲೇ ದಂಡವನ್ನು ವಸೂಲಿ ಮಾಡಬಹುದಿತ್ತು. ಆದರೆ ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸ್ ಇಲಾಖಾಧಿಕಾರಿಗಳು ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಆದರೆ ದೂರು ದಾಖಲಾದರು ತಪ್ಪಿತಸ್ಥರನ್ನು ಬಂಧಿಸಿಲ್ಲ ಎಂದರೇ ಪೊಲೀಸ್ ಅಧಿಕಾರಿಗಳು ಇದ್ದು ಏನು ಪ್ರಯೋಜನ ಅಸಮಾಧಾನ ವ್ಯಕ್ತಪಡಿಸಿ, ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿ ಮೇಲೆ ತಕ್ಷಣ ಬಂಧಿಸಿ ನ್ಯಾಯಾಲಯದ ಮುಂದೇ ಹಾಜರುಪಡಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News