ಕಾಫಿ ತೋಟಗಳ ಹರಾಜನ್ನು 6 ತಿಂಗಳ ಕಾಲ ಅವಧಿಗೆ ಮುಂದೂಡಬೇಕು: ಲೀಡ್‍ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ

Update: 2024-10-21 18:20 GMT

ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆಯಿಂದಾಗುತ್ತಿರುವ ಕಾಫಿ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಲಾಗುವುದು. ಅಲ್ಲಿಯವರೆಗೆ ಚಿಕ್ಕಮಗಳೂರು ಸೇರಿದಂತೆ ನೆರೆಯ ಹಾಸನ, ಸಕಲೇಶಪುರ, ಮಡಿಕೇರಿ ಜಿಲ್ಲೆಗಳ ಕಾಫಿ ಬೆಳೆಗಾರರ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಕಾಫಿತೋಟಗಳ ಹರಾಜು ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಮುಂದಿನ 6 ತಿಂಗಳುಗಳ ಕಾಲ ಯಾವುದೇ ಬ್ಯಾಂಕ್‍ಗಳು ಕಾಫಿ ತೋಟಗಳ ಹರಾಜಿಗೆ ಮುಂದಾಗಬಾರದು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಕಾಫಿ ಬೆಳೆಗಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಬೆಳೆಗಾರರು ಮಾತನಾಡಿ, ಕೆನರಾ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾವಿರಾರು ಕಾಫಿ ಬೆಳೆಗಾರರು ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಸಾಲ ಪಡೆದುಕೊಂಡಿದ್ದಾರೆ. ಆದರೆ ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಕೈಗೆ ಸಿಗದೇ ಬೆಳೆಗಾರರು ಸಕಾಲಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡದ ಬೆಳೆಗಾರರಿಗೆ ಬ್ಯಾಂಕ್‍ಗಳು ನೋಟಿಸ್ ನೀಡಿ ಕಿರುಕುಗಳ ನೀಡುತ್ತಿವೆ. ಕೆನರಾ ಬ್ಯಾಂಕ್ ಕಾಫಿತೋಟಗಳನ್ನು ಆನ್‍ಲೈನ್ ಮೂಲಕ ಹರಾಜು ಹಾಕುವ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಲ ಮರುಪಾವತಿಗೆ ಕಾಲಾವಕಾಶ ಕೇಳಿದರೂ ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಳೆಗಾರರು ಹವಾಮಾನ ವೈಫರೀತ್ಯದಿಂದಾಗಿ ಭಾರೀ ಸಮಸ್ಯೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳು ಸರ್ಫೇಸಿ ಕಾಯ್ದೆಯ ಸಂಬಂಧ ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ತೋಟಗಳನ್ನು ಆನ್‍ಲೈನ್ ಮೂಲಕ ಹರಾಜು ಹಾಕಲು ಮುಂದಾಗಿರುವುದು ಬ್ಯಾಂಕ್‍ಗಳ ಸರ್ವಾಧಿಕಾರಿ ಧೋರಣೆಯಾಗಿದೆ ಎಂದ ಮುಖಂಡರು, ಸಾಲ ಮರುಪಾವತಿ ಮಾಡಲು ಕಾಲವಕಾಶ ನೀಡದ ಕೆನರಾ ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ಒನ್ ಟೈಮ್ ಸೆಟ್ಲಮೆಂಟ್ ಮಾಡಿಕೊಳ್ಳಲೂ ಬ್ಯಾಂಕ್ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸಂದದ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಅಳಲು ತೋಡಿಕೊಂಡರು.

ನಿರಾಕರಿಸುತ್ತಿದ್ದಾರೆಂದು ಬೆಳೆಗಾರರು ಸಂಸದರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸರ್ಫೇಸ್ ಕಾಯ್ದೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದೊಂದಿಗೆ ಸಭೆ ನಡೆಸಲಾಗುವುದು. ಕಾಯ್ದೆ ಬಗ್ಗೆ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು, ಕಾಫಿ ಬೆಳೆಗಾರರು ಸಂಕಷ್ಟದಲ್ಲಿರುವಾಗ ಅವರ ಭೂಮಿಯನ್ನು ಹರಾಜು ಹಾಕಿದರೇ ರೈತರಿಗೆ ಭಾರೀ ಸಮಸ್ಯೆಯಾಗಲಿದೆ. ಕಾಫಿ ತೋಟಗಳನ್ನು ಹರಾಜು ಮಾಡುವುದನ್ನು ಬ್ಯಾಂಕ್‍ಗಳು ಮುಂದಿನ 6ತಿಂಗಳ ಅವಧಿಗೆ ಮುಂದೂಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಬ್ಯಾಂಕ್‍ನ ಅಧಿಕಾರಿಗಳು ಸಮ್ಮತಿಸಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯಕ್ರಮವಹಿಸಲಾಗುವುದು ಎಂದು ಬೆಳೆಗಾರರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಮೂಡಿಗೆರೆ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಬೆಳೆಗಾರರು ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News