ಚಿಕ್ಕಮಗಳೂರಿನಲ್ಲಿ ಗಗನ್ ಕಡೂರು ಕರೆತಂದು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು
ಚಿಕ್ಕಮಗಳೂರು, ಸೆ.19: ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಚಿಕ್ಕಮಗಳೂರಿನಲ್ಲಿ ತನಿಖೆ ಆರಂಭಿಸಿದ್ದಾರೆ.
ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿಯನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಲ್ಲಿ ಓರ್ವನಾದ ಗಗನ್ ಕಡೂರುನನ್ನು ಇಂದು ಬೆಳಗ್ಗೆ ಚಿಕ್ಕಮಗಳೂರು ಪ್ರವಾಸಿ ಮಂದಿರಕ್ಕೆ ಕರೆತಂದಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಐಬಿಯ ಸಿಬ್ಬಂದಿ ಹಾಗೂ ಆರೋಪಿ, ದೂರುದಾರರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆರೋಪಿಗಳಾದ ಚೈತ್ರಾ ಕುಂದಾಪುರ ಮತ್ತ ಮತ್ತು ಗ್ಯಾಂಗ್ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಶ್ವನಾಥ್ ಜೀ ಎಂಬಾತನನ್ನು ಭೇಟಿ ಮಾಡಿಸಿದ್ದು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಎನ್ನಲಾಗಿದೆ. ಆರೋಪಿಗಳು ಪೂಜಾರಿಯೊಂದಿಗೆ 2ನೇ ಮೀಟಿಂಗ್ ನಡೆಸಿದ್ದು ಈ ಪ್ರವಾಸಿ ಮಂದಿರದಲ್ಲಿ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿ ತನಿಖೆ ನಡೆಸಿದ್ದಾರೆ.
ಆರೋಪಿಗಳು ಪ್ರವಾಸಿ ಮಂದಿರಕ್ಕೆ ಆಗಮಿಸಿರುವ ಬಗ್ಗೆ ಪ್ರವಾಸಿ ಮಂದಿರದ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಿಚಾರಿಸಿ ಮಾಹಿತಿ ಪಡೆದಿದ್ದಾರೆ.