ಚೈತ್ರ ಗ್ಯಾಂಗ್​ನಿಂದ ವಂಚನೆ ಪ್ರಕರಣ | ಜಾಮೀನಿನ ಮೇಲೆ ಹೊರ ಬಂದ ಆರೋಪಿಯಿಂದ ಸಾಕ್ಷಿ ಮೇಲೆ ಹಲ್ಲೆ; ಎಸ್ಪಿಗೆ ದೂರು

Update: 2024-03-27 14:40 GMT

ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಆತನಿಂದ ಕೋಟ್ಯಂತರ ರೂ. ಪಡೆದು ವಂಚನೆ ಮಾಡಿದ ಚೈತ್ರಾ  ಪ್ರಕರಣದ ಪ್ರಮುಖ ಆರೋಪಿ ಧನ್‍ ರಾಜ್ ಎಂಬಾತ, ವಂಚನೆ ಪ್ರಕರಣದ ಸಾಕ್ಷಿಯಾದ ಸಲೂನ್ ಮಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಳೆದ ಸೋಮವಾರ ಕಡೂರು ಪಟ್ಟಣದಲ್ಲಿ ನಡೆದಿದೆ. ಹಲ್ಲೆ ಘಟನೆ ಸಂಬಂಧ ಬೀರೂರು ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿ ಸಲೂನ್ ಮಾಲಕ ಬುಧವಾರ ಎಸ್ಪಿಗೆ ದೂರು ನೀಡಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದ ಚೈತ್ರಾ ಹಾಗೂ ಆಕೆಯ ಸಹಚರರು, ನಕಲಿ ಪಾತ್ರಧಾರಿಗಳನ್ನು ಸೃಷ್ಟಿಸಿ ಉದ್ಯಮಿಯನ್ನು ನಂಬಿಸಿದ್ದರು. ಟಿಕೆಟ್ ಸಿಗುವ ನಂಬಿಕೆಯಿಂದ ಉದ್ಯಮಿ ಚೈತ್ರಾ ಗ್ಯಾಂಗ್‍ಗೆ 5 ಕೋಟಿ ಹಣ ನೀಡಿದ್ದರು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಉದ್ಯಮಿ ಗೋವಿಂದ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ವಂಚನೆ ಪ್ರಕರಣದ ಆರೋಪಿಗಳಾದ ಚೈತ್ರಾ , ಧನ್‍ರಾಜ್ ಹಾಗೂ ಇತರರನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ಕಳೆದ ತಿಂಗಳು ಜಾಮೀನು ಪಡೆದುಕೊಂಡಿರುವ ಪ್ರಮುಖ ಆರೋಪಿ ಧನ್‍ರಾಜ್, ಕಳೆದ ಸೋಮವಾರ ಕಡೂರಿನ ಹೊಟೇಲ್‍ವೊಂದಕ್ಕೆ ಸಲೂನ್ ನಡೆಸುತ್ತಿರುವ ಪ್ರಕರಣದ ಪ್ರಮುಖ ಸಾಕ್ಷಿ ರಾಮು ಎಂಬವರನ್ನು ಕರೆಸಿಕೊಂಡಿದ್ದಾನೆ. ಅಲ್ಲದೆ ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಕಾರಣಕ್ಕೆ ಹಲ್ಲೆ ನಡೆಸಿದ್ದಲ್ಲೇ, ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ತಿಳಿದು ಬಂದಿದೆ. ಈ ಹಲ್ಲೆ ಪ್ರಕರಣ ಸಂಬಂಧ ರಾಮು, ಬೀರೂರು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಎಸ್ಪಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿ ಪೊಲೀಸರು, ಕಡೂರು ಪಟ್ಟಣದಲ್ಲಿ ಸಲೂನ್ ನಡೆಸುತ್ತಿದ್ದ ರಾಮು ಎಂಬಾತನನ್ನು ವಿಚಾರಣೆಗೊಳಪಡಿಸಿದ್ದರು. ಚೈತ್ರಾ ನಿರ್ದೇಶನದಂತೆ ಆರೋಪಿ ಧನ್‍ರಾಜ್, ಚೆನ್ನಾ ನಾಯ್ಕ್ ಎಂಬಾತನನ್ನು ರಾಮು ನಡೆಸುತ್ತಿದ್ದ ಸಲೂನ್‍ಗೆ ಕರೆತಂದು ಆತನಿಗೆ ಗೋಪಾಲ್ ಜೀ ಎಂಬವರ ಪೊಟೊ ತೋರಿಸಿ ಅವರಂತೆ ಮೇಕಪ್, ಹೇರ್ ಸ್ಟೈಲ್ ಮಾಡುವಂತೆ ಹೇಳಿದ್ದ. ಧನ್‍ರಾಜ್ ಹೇಳಿದಂತೆ ರಾಮು ಮೇಕಪ್ ಮಾಡಿದ್ದನ್ನು ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ರಾಮು ಮಾಧ್ಯಮದವರಿಗೂ ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ರಾಮು ಚೈತ್ರಾ‌ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು.

ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಧನ್‍ರಾಜ್, ಕಡೂರಿನಲ್ಲಿ ಹೊಟೇಲ್‍ವೊಂದಕ್ಕೆ ರಾಮುನನ್ನು ಕರೆಸಿಕೊಂಡು, ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ರಾಮು ಆರೋಪಿಸಿದ್ದಾರೆ. ಬುಧವಾರ ಕುಟುಂಬ ಸಹಿತ ನಗರದ ಎಸ್ಪಿ ಕಚೇರಿಗೆ ಆಗಮಿಸಿ, ಘಟನೆ ಸಂಬಂಧ ಬೀರೂರು ಪೊಲೀಸರಿಗೆ ದೂರು ನೀಡಿದರೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರು ನೀಡಿದ್ದಾರೆ. ಹಲ್ಲೆ ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News