ಚಿಕ್ಕಮಗಳೂರು | ನಂಬರ್ ಪ್ಲೇಟ್ ಬದಲಿಸಿ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ.ರೂ ಜಪ್ತಿ
ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಚುನಾವಣಾಧಿಕಾರಿಗಳು ಜಿಲ್ಲಾದ್ಯಂತ ಚೆಕ್‍ಪೋಸ್ಟ್ ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಬುಧವಾರ ಸಂಜೆ ನಂಬರ್ ಪ್ಲೇಟ್ ಬದಲಾಯಿಸಿ 20 ಲಕ್ಷ ರೂ. ಸಾಗಿಸುತ್ತಿದ್ದ ಓಮ್ನಿ ಕಾರನ್ನು ಜಪ್ತಿ ಮಾಡಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡಿಪಾಳ್ಯ ಚೆಕ್‍ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳ ತಂಡ 20 ಲಕ್ಷ ರೂ. ಮೊತ್ತದ ಹಣವನ್ನು ಸೀಜ್ ಮಾಡಿದ್ದು, ಈ ಹಣವನ್ನು ಪಂಚನಹಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‍ನಿಂದ ಓಮ್ನಿ ವಾಹನದಲ್ಲಿ ಹಿರಿಯೂರಿನ ಡಿ.ಎಂ.ಕರ್ಕೆ ಎಂಬ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.
ಈ ಹಣ ಕೆನರಾ ಬ್ಯಾಂಕ್‍ಗೆ ಸೇರಿದ ಹಣ ಎನ್ನಲಾಗುತ್ತಿದ್ದು, ಬ್ಯಾಂಕ್‍ನ ಹಣವಾಗಿದ್ದರೇ ನಂಬರ್ ಪ್ಲೇಟ್ ಬದಲಾಯಿಸಿ ಸಾಗಿಸುತ್ತಿದ್ದುದು ಏಕೆ?, ಬ್ಯಾಂಕ್ ಹಣ ಸಾಗಿಸುವ ವೇಳೆ ಗನ್ ಮ್ಯಾನ್‍ಅನ್ನು ಜೊತೆಯಲ್ಲಿ ಕರೆದೊಯ್ಯದಿರುವುದು ಏಕೆ? ಎಂಬ ಪ್ರಶ್ನೆ ಮೂಡಿದ್ದು, ಚುನಾವಣಾಧಿಕಾರಿಗಳ ತಂಡ ಹಣ ಹಾಗೂ ವಾಹನವನ್ನು ಜಪ್ತಿ ಮಾಡಿ ಹಣದ ಮೂಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ.