ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ; ಕೃಷಿ ಚಟುವಟಿಕೆಯತ್ತ ಮುಖ ಮಾಡಿದ ರೈತರು
ಚಿಕ್ಕಮಗಳೂರು : ಕಳೆದ ಮೂರು ದಿನಗಳಿಂದ ಕಾಫಿನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಳೆ ಇಲ್ಲದೇ ಕಂಗಾಲಾಗಿದ್ದ ಮಲೆನಾಡು, ಬಯಲು ಭಾಗದ ರೈತರಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ.
ಮೋಡಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಕಾಫಿನಾಡಿನಲ್ಲಿ ಸದ್ಯ ಬಿಸಿಲಧಗೆ ಕಡಿಮೆಯಾಗಿ ಬಿಸಿಗಾಳಿಗೆ ನಲುಗಿದ್ದ ಜಿಲ್ಲೆ ಸದ್ಯ ತಣ್ಣಗಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.
ಕಾಫಿನಾಡಿನ ಇತಿಹಾಸದಲ್ಲಿ ಈ ವರ್ಷ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಭಾರೀ ತಾಪಮಾನದೊಂದಿಗೆ ಬಿಸಿಗಾಳಿಯ ಧಗೆಗೆ ತತ್ತರಿಸಿದ್ದ ಕಾಫಿನಾಡು, ಮಳೆಗಾಗಿ ಆಕಾಶ ನೋಡುವಂತಾಗಿತ್ತು. ಕಳೆದ ಮೂರು ದಿನಗಳಿಂದ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದು ಸಾರ್ವಜನಿಕರು ಮತ್ತು ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ. ಕಳೆದ ಗುರವಾರ ಸಂಜೆ ಚಿಕ್ಕಮಗಳೂರು ತಾಲೂಕು ಸೇರಿದಂತೆ ಮಲೆನಾಡು ಭಾಗದ ಅಲ್ಲಲ್ಲಿ ಅಬ್ಬರಿಸಿದ್ದ ಮಳೆ ಶುಕ್ರವಾರ ಅಲ್ಲಲ್ಲಿ ಸಾಧಾರಣವಾಗಿ ಸುರಿದ ಮತ್ತೆ ಮಾಯವಾಗಿತ್ತು. ಆದರೆ ಶುಕ್ರವಾರ ಮಧ್ಯರಾತ್ರಿ ಚಿಕ್ಕಮಗಳೂರು, ಕಡೂರು, ತರೀಕೆರೆ ಹಾಗೂ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು. ಶನಿವಾರ ಸಂಜೆ ಚಿಕ್ಕಮಗಳೂರು ತಾಲೂಕು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣವಾಗಿ ಸುರಿದ ಮಳೆ ಮಲೆನಾಡು ಭಾಗದಲ್ಲಿ ಅಬ್ಬರಿಸಿತು.
ಮಲೆನಾಡು ಭಾಗ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲ ಹೊತ್ತು ಧಾರಾಕಾರ ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಬತ್ತಿ ಹೋಗಿದ್ದ ಭದ್ರಾ, ತುಂಗಾ, ಹೇಮಾವತಿಯಂತಹ ಪ್ರಮುಖ ನದಿಗಳಲ್ಲಿ ಕೊಂಚ ನೀರಿನ ಹರಿವು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಭಾಗದ ರೈತರ ಹಾಗೂ ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಬಯಲು ಭಾಗದ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ರೈತರು ಬಿತ್ತನೆಗೆ ಜಮೀನು, ಹೊಲಗಳಲ್ಲಿ ಕೃಷಿ ಚಟುವಟಿಕೆಗೆ ಮುಂದಾಗಿದ್ದರೇ, ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳಿಗೆ ಈ ಮಳೆ ನೀರು ಹಾಯಿಸಬೇಕಾದ ಬೆಳೆಗಾರರ ಸಂಕಷ್ಟವನ್ನು ದೂರ ಮಾಡಿದೆ.
ಉತ್ತಮ ಮಳೆ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಮುಂದಾಗಿದೆ. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನಿದೆ ಎಂದು ಜಿಲ್ಲಾಧಿಕಾರಿ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.