ಚಿಕ್ಕಮಗಳೂರು | ಅನೈತಿಕ ಸಂಬಂಧಕ್ಕೆ ಅಡ್ಡಿ : ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ

Update: 2024-06-22 17:33 GMT

 ಆರೋಪಿಗಳಾದ ಶೃತಿ/ ಕಿರಣ್‍ಕುಮಾರ್

ಚಿಕ್ಕಮಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣವೊಂದನ್ನು ಬೇಧಿಸಿರುವ ಜಿಲ್ಲೆಯ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಹತ್ಯೆಯಾದ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾದ ಪತಿಯನ್ನು ದೊಡ್ಡಬೀರನಹಳ್ಳಿ ಗ್ರಾಮದ ಜಯಣ್ಣ(40) ಎಂದು ಗುರುತಿಸಲಾಗಿದೆ. ಜಯಣ್ಣ ಅವರ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಕಿರಣ್‍ಕುಮಾರ್ ಹತ್ಯೆ ಆರೋಪಿಗಳಾಗಿದ್ದಾರೆ.

ದೊಡ್ಡಬೀರನಹಳ್ಳಿ ಗ್ರಾಮದ ಜಯಣ್ಣ ಎಂಬವರು ಶೃತಿ ಎಂಬವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ಬಳಿಕ ಶೃತಿ ತನ್ನ ಸಂಬಂಧಿಯೊಂದಿಗೆ ಸಲುಗೆಯಿಂದಿದ್ದು, ಈ ಸಲುಗೆ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತ್ನಿ ಹಾಗೂ ಆಕೆಯ ಸಂಬಂಧಿ ನಡುವಿನ ಅನೈತಿಕ ಸಂಬಂಧ ಪತಿ ಜಯಣ್ಣನ ಗಮನಕ್ಕೆ ಬಂದಿದ್ದು, ಇದರಿಂದ ಕುಪಿತನಾದ ಆತ ಇಬ್ಬರೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ಈ ವಿಚಾರ ಸಂಬಂಧ ಜಯಣ್ಣ ಹಾಗೂ ಆಕೆಯ ಪತ್ನಿಯೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿದ್ದರೂ ಶೃತಿ ತನ್ನ ಸಂಬಂಧಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ತಿಳಿದು ಬಂದಿದೆ.

ತಮ್ಮ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಶೃತಿ ಹಾಗೂ ಆಕೆಯ ಪ್ರಿಯಕರ ಜಯಣ್ಣನನ್ನು ಹತ್ಯೆ ಮಾಡಲು ಸಂಚು ಮಾಡಿದ್ದರು. ಅದರಂತೆ ಕಳೆದ ಜೂ.16ರಂದು ಪ್ರೇಮಿಗಳಿಬ್ಬರು ಸೇರಿ ಮದ್ಯದಲ್ಲಿ ವಿಷ ಮಿಶ್ರಣ ಮಾಡಿ ಜಯಣ್ಣನಿಗೆ ಕುಡಿಸಿದ್ದರು. ಪತ್ನಿ ಹಾಗೂ ಆಕೆಯ ಪ್ರಿಯಕರ ಸಂಚು ಅರಿಯದ ಪತಿ ಜಯಣ್ಣ ಇದರಿಂದ ಅಸ್ವಸ್ಥನಾಗಿ ಹೊಟ್ಟೆ ನೋವಿನಿಂದ ನರಳಾಟ ಆರಂಭಿಸುತ್ತಿದ್ದಂತೆ ಪತ್ನಿ ಶೃತಿ ತನ್ನ ಪ್ರಿಯಕರ ಕಿರಣ್‍ ಕುಮಾರ್ ನ ಕಾರಿನಲ್ಲಿ ಜಯಣ್ಣನನ್ನು ಕೂರಿಸಿಕೊಂಡು ಅರಸೀಕೆರೆಯ ಆಸ್ಪತ್ರೆಗೆ ದಾಖಲಿಸುವುದಾಗಿ ಕರೆದೊಯ್ದಿದ್ದರು ಎನ್ನಲಾಗಿದೆ.

ತಮ್ಮ ಸಂಚಿನಂತೆ ದಾರಿ ಮಧ್ಯೆ ಶೃತಿ ಹಾಗೂ ಕಿರಣ್‍ಕುಮಾರ್ ಟವೆಲ್‍ನಿಂದ ಅಸ್ವಸ್ಥನಾಗಿದ್ದ ಜಯಣ್ಣನ ಬಾಯಿ, ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ನಂತರ ಮೃತದೇಹವನ್ನು ಊರಿಗೆ ತಂದು ಚಿಕಿತ್ಸೆ ಫಲಕಾರಿಯಾದ ಜಯಣ್ಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಜಯಣ್ಣನ ಹೊಟ್ಟೆಯಲ್ಲಿ ಗೆಡ್ಡೆಯಾಗಿತ್ತು ಎಂದು ಸಂಬಂಧಿಕರಿಗೆ ಸುಳ್ಳು ಹೇಳಿ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಈ ಘಟನೆ ಸಂಬಂಧ ಶೃತಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಿಸಿದ್ದರು.

ಜಯಣ್ಣ ಸಾವಿನ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಸೈ ಅವರಿಗೆ ಶೃತಿ ಹಾಗೂ ಆಕೆಯ ಪ್ರಿಯಕರ ಕಿರಣ್‍ಕುಮಾರ್ ಅವರು ಮೊಬೈಲ್‍ಗಳಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡು ಕಿರಣ್‍ಕುಮಾರ್ ನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಶೃತಿ ಹಾಗೂ ಕಿರಣ್‍ಕುಮಾರ್ ಸಂಚು ಮಾಡಿ ಜಯಣ್ಣನಿಗೆ ವಿಷ ಉಣಿಸಿ ನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಶೃತಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ಸಖರಾಯಪಟ್ಟಣ ಹಾಗೂ ಕಡೂರು ಪೊಲೀಸ್ ಠಾಣೆಯ ಸಿಪಿಐ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ಬಹುಮಾನ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News