ಚಿಕ್ಕಮಗಳೂರು | ತುಂಬಿ ಹರಿಯುತ್ತಿರುವ ಭದ್ರಾ ನದಿ : ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ

Update: 2024-06-27 14:58 GMT

ಚಿಕ್ಕಮಗಳೂರು : ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗಡೆ  ಮುಳುಗುವ ಹಂತಕ್ಕೆ ತಲುಪಿದೆ.

ಜೂನ್ ತಿಂಗಳ ಆರಂಭದಲ್ಲಿ ಜಿಲ್ಲಾದ್ಯಂತ ಉತ್ತಮ ಸುರಿದಿದ್ದು, ಸುಮಾರು 15 ದಿನಗಳ ಕಾಲ ಸುರಿದ ಮಳೆ ಮತ್ತೆ ಮಾಯವಾಗಿತ್ತು. ಮೂರು ದಿನಗಳ ಹಿಂದೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿತ್ತು. ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ಧಾರಾಕಾರ ಮಳೆಯಾಗುತ್ತಿದ್ದು, ಗುರುವಾರವೂ ಭಾರೀ ಮಳೆಯಾದ ಪರಿಣಾಮ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆಯಿದ ಸಂಜೆವರೆಗೆ ಧಾರಾಕಾರ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಮಲೆನಾಡಿನ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತುಂಬಿ ಹರಿಯುತ್ತಿರುವ ನದಿಗಳಿಂದಾಗಿ ಅಕ್ಕಪಕ್ಕದ ಗ್ರಾಮಗಳಲ್ಲಿ ನೆರೆ, ಪ್ರವಾಹದ ಭೀತಿಯೂ ಉಂಟಾಗಿದೆ ಎನ್ನಲಾಗಿದೆ. ಕಳಸ ತಾಲೂಕು ವ್ಯಾಪ್ತಿಯ ಕುದುರೆಮುಖ, ಸಂಸೆ, ಹೊರನಾಡು, ಕಳಸ, ಹಿರೇಬೈಲು ಮತ್ತಿತರ ಗ್ರಾಮಗಳಲ್ಲಿ ಧಾರಾಕಾರ ಮಳೆ ಪರಿಣಾಮ ಭದ್ರಾ ನದಿಯಲ್ಲಿ ಭಾರೀ ನೀರು ಹರಿಯಲಾರಂಭಿಸಿದೆ. ಭಾರೀ ನೀರಿನ ಪರಿಣಾಮ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೆಲವೇ ಅಡಿಗಳು ಬಾಕಿ ಇದ್ದು, ಮಳೆ ಮುಂದುವರಿದಲ್ಲಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಹೆಬ್ಬಾಳೆ ಸೇತುವೆ ಮುಳುಗು ಸೇತುವೆ ಎಂದೇ ಹೆಸರಾಗಿದ್ದು, ಪ್ರತೀ ಮಳೆಗಾಲದಲ್ಲಿ ಈ ಸೇತುವೆ ನಾಲ್ಕೈದು ಭಾರೀ ಭದ್ರಾ ನದಿ ನೀರಿನಲ್ಲಿ ಮುಳುಗಡೆಯಾಗುವುದು ಸಾಮಾನ್ಯವಾಗಿದೆ. ಸತತ ಮುಳುಗಡೆಯಿಂದಾಗಿ ಸೇತುವೆ ಶಿಥಿಲಗೊಂಡಿದ್ದು, ಇದೇ ಸೇತುವೆ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಈ ಸೇತುವೆ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಹಳೆಯ ಸೇತುವೆಯಲ್ಲಿ ವಾಹನ, ಜನಸಂಚಾರ ನಡೆಯುತ್ತಿದೆ. ಸದ್ಯ ಭಾರೀ ಮಳೆ ಪರಿಣಾಮ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಿದೆ. ತುಂಗಾ, ಹೇಮಾವತಿ ನದಿಗಳೂ ತುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಿಗೆ, ಹೊಲಗದ್ದೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News