ಚಿಕ್ಕಮಗಳೂರು | ಅಂತರ್ ಜಿಲ್ಲಾ ಬೈಕ್ ಕಳ್ಳತನ : ಮೂವರು ಅರೋಪಿಗಳ ಬಂಧನ

Update: 2024-07-02 16:20 GMT

ಚಿಕ್ಕಮಗಳೂರು : ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಮತ್ತು ಹೊರ ಜಿಲ್ಲೆಗಳಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಿಂದ 8.50ಲಕ್ಷ ರೂ. ಮೌಲ್ಯದ 17 ಬೈಕ್, 2.15ಲಕ್ಷ ರೂ.ನಗದು ಹಾಗೂ 50ಸಾವಿರ ರೂ. ಮೌಲ್ಯದ ಬೈಕ್‍ಗಳ ಬಿಡಿ ಭಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆ, ಮಲ್ಲಾಪುರ ನಿವಾಸಿ  ಖಯ್ಯಮ್ ಪಾಶ(34), ಹಾಸನ ಜಿಲ್ಲೆಯ ಗೊಲ್ಲೇನಹಳ್ಳಿ ಗ್ರಾಮದ ಎಲೆಕ್ಟ್ರೀಷಿಯನ್ ನವೀನ್‍ಕುಮಾರ್ ಹಾಗೂ ಭದ್ರಾವತಿ ನಿವಾಸಿ ಉಮೇರ್ ಬೇಗ್ ಎಂದು ಗರುತಿಸಲಾಗಿದೆ.

ಆರೋಪಿಗಳ ಮೇಲೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಬೈಕ್ ಕಳ್ಳತನ ಪ್ರಕರಣಗಳು, ನಗರಠಾಣೆಯಲ್ಲಿ 18 ಬೈಕ್ ಕಳ್ಳತನ ಪ್ರಕರಣ, ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಠಾಣೆ ಮತ್ತು ಹೊನ್ನಾಳಿ ಠಾಣೆಯಲ್ಲಿ ತಲಾ 1 ಬೈಕ್ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 30 ಬೈಕ್‍ಗಳನ್ನು ಕಳ್ಳತನ ಪ್ರಕರಣಗಳು ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಎಸ್ಪಿ ವಿಕ್ರಮ್ ಅಮಟೆ, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ಮಾರ್ಗದರ್ಶನದಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಕಲೈಮಾರ್ ಮತ್ತು ಬಾಬುದ್ದೀನ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ವಶಕ್ಕೆ ಪಡೆದ ಬೈಕ್‍ಗಳಲ್ಲಿ 17 ಬೈಕ್‍ಗಳು ಸುಸ್ಥಿತಿಯಲ್ಲಿದ್ದು, 13 ಬೈಕ್‍ಗಳನ್ನು ಆರೋಪಿಗಳು ಭದ್ರವಾತಿಯ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News