ಚಿಕ್ಕಮಗಳೂರು| ದತ್ತಜಯಂತಿಗೆ ಜಿಲ್ಲಾದ್ಯಂತ 4 ಸಾವಿರ ಪೊಲೀಸರಿಂದ ಬಿಗಿ ಬಂದೋಬಸ್ತ್: ಎಸ್ಪಿ ವಿಕ್ರಮ್ ಅಮಟೆ

Update: 2023-12-22 13:53 GMT

ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ದತ್ತಜಯಂತಿ ಅಂಗವಾಗಿ ಡಿ.26ರವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ 4ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದರು.

ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.17ರಂದು ದತ್ತಭಕ್ತರು ದತ್ತಮಾಲಾಧಾರಣೆ ಮಾಡಿದ್ದು, ಡಿ.24ರಿಂದ 26ರವರೆಗೆ ದತ್ತಜಯಂತಿ ನಡೆಯಲಿದೆ. ಡಿ.24ರಂದು ಸಂಕೀರ್ತನ ಯಾತ್ರೆ, ಡಿ.25ರಂದು ಶೋಭಾಯಾತ್ರೆ ಹಾಗೂ ಡಿ.26ರಂದು ದತ್ತಪೀಠದಲ್ಲಿ ದತ್ತಭಕ್ತರು ದತ್ತಪಾದುಕೆಗಳ ದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

ದತ್ತಜಯಂತಿ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರ ಸಭೆ ನಡೆಸಿ ಸಹಕಾರ ಕೋರಿದ್ದು, ಸಂಪೂರ್ಣ ಸಹಕಾರ ನೀಡುವುದಾಗಿ ಮುಖಂಡರು ತಿಳಿಸಿದ್ದಾರೆ. ಈ ಬಾರಿ ಹಿಂದಿನ ವರ್ಷದಂತೆಯೇ ದತ್ತಜಯಂತಿ ಪೂಜಾ ವಿಧಾನಗಳು ನಡೆಯಲಿದ್ದು, ದತ್ತಜಯಂತಿಗೆ ಸಾವಿರಾರು ಭಕ್ತರು ಬರುವುದರಿಂದ ಎಲ್ಲೆಡೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ. ಅದರಂತೆ ಜಿಲ್ಲಾ ಪೊಲೀಸ್ ಇಲಾಖೆಯೂ ಸಂಘಟಕರೊಂದಿಗೆ ಸಭೆಗಳನ್ನು ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಜಿಲ್ಲಾದ್ಯಂತ 28 ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಪ್ರತೀ ಚೆಕ್‍ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಸೇರಿದಂತೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಸಿಬ್ಬಂದಿ ಹೊರ ಜಿಲ್ಲೆಗಳಿಂದ ಬರುವ ಪ್ರತೀ ವಾಹನಗಳನ್ನು ತಪಾಸಣೆ ಮಾಡುವುದರೊಂದಿಗೆ ದತ್ತ ಭಕ್ತರಿಗೆ ಸೂಕ್ತ ತಿಳುವಳಿಕೆ, ಮಾರ್ಗದರ್ಶನವನ್ನೂ ಮಾಡಲಿದ್ದಾರೆ ಎಂದರು.

ರಾಜ್ಯ ಸರಕಾರ ಕೋವಿಡ್ ಮಾರ್ಗಸೂಚಿಯಂತೆ ಪೊಲೀಸ್ ಸಿಬ್ಬಂದಿಗೆ ಅಗತ್ಯವಾದ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ತಿಳಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News