ಚಿಕ್ಕಮಗಳೂರು | ಸೈಬರ್ ವಂಚಕರ ಮಾತು ನಂಬಿ 76ಲಕ್ಷ ರೂ. ಕಳೆದುಕೊಂಡ ವೈದ್ಯ!

Update: 2024-05-06 14:36 GMT

ಸಾಂದರ್ಭಿಕ ಚಿತ್ರ: PTI

ಚಿಕ್ಕಮಗಳೂರು : ಸೈಬರ್ ವಂಚಕರ ವಂಚನೆಯ ಜಾಲಕ್ಕೆ ಸಿಲುಕಿದ ನಗರದ ವೈದ್ಯರೊಬ್ಬರು ಅಧಿಕ ಹಣ ಗಳಿಸುವ ಆಸೆಯಿಂದ ವಂಚಕರ ಮಾತು ನಂಬಿ ವಿವಿಧ ಬ್ಯಾಂಕ್ ಖಾತೆಗೆ 76ಲಕ್ಷ ರೂ. ಹಣ ಜಮೆ ಮಾಡಿ ಮೋಸ ಹೋಗಿರುವ ಬಗ್ಗೆ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿಯಾಗಿದೆ.

ನಗರದ ನಿವಾಸಿಯಾಗಿರುವ ವೈದ್ಯರೊಬ್ಬರಿಗೆ ಸ್ಟಾಕ್ ಎಕ್ಸ್‌ ಚೇಂಜ್ ಮಾರ್ಕೆಟ್‍‌ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವಂತೆ ವಿಐಪಿ ಆನಂದ್ ವ್ಯಾನ್‍ಗಾರ್ಡ್ ಗ್ರೂಪ್‍ನಿಂದ ಕರೆ ಮಾಡಿದ್ದ ವಂಚಕರು ತಮ್ಮ ಕಂಪೆನಿಯಲ್ಲಿ ಹಣ ಹೂಡುವಂತೆ ಹೇಳಿದ್ದರು ಎನ್ನಲಾಗಿದೆ. ಇವರ ಮಾತನ್ನು ನಂಬಿದ ಈ ವೈದ್ಯ 2024, ಮಾ.24ರಿಂದ ಎ.16ರವರೆಗೆ ವಂಚಕರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 76ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರು ಎಂದು ಹೇಳಲಾಗಿದೆ.

ಆದರೆ 2 ತಿಂಗಳು ಕಳೆದರೂ ವೈದ್ಯ ವಂಚಕರ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ಯಾವುದೇ ಲಾಭ ನೀಡದೇ, ಹೂಡಿಕೆ ಮಾಡಿದ್ದ ಹಣವನ್ನೂ ನೀಡದೇ ಯಾಮಾರಿಸಿದ್ದರು. ಇದರಿಂದ ಅನುಮಾನ ಗೊಂಡ ವೈದ್ಯ ಕಂಪೆನಿಗೆ ಕರೆ ಮಾಡಿದಾಗ ವಿಚಾರಿಸಿದಾಗ, ಇನ್ನೂ 22 ಲಕ್ಷ ಹಣವನ್ನು ಖಾತೆಗೆ ಹಾಕಬೇಕೆಂದು ತಿಳಿಸಿದ್ದಾರೆ. ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ವೈದ್ಯ ಕೂಡಲೇ ನಗರದ ಸೈಬರ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕರು ಇಂತಹ ಸ್ಟಾಕ್ ಎಕ್ಸ್ ಚೇಂಜ್ ಮಾರ್ಕೆಟ್ ಕಂಪೆನಿಗಳ ಮಾತು ನಂಬಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಬಾರದು. ಇಂತಹ ಸೈಬರ್ ಫ್ರಾಡ್‍ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News