ಚಿಕ್ಕಮಗಳೂರು | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90ಗ್ರಾಂ. ಚಿನ್ನದ ಉಂಗುರಗಳು ಜಪ್ತಿ

Update: 2024-03-19 12:38 GMT

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದು, ಮಂಗಳವಾರ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರಗಳನ್ನು ಜಪ್ತಿ ಮಾಡಿರುವ ಘಟನೆ ತಾಲೂಕಿನ ವಸ್ತಾರೆ ಗ್ರಾಮದ ಜಂಕ್ಷನ್‍ನಲ್ಲಿ ವರದಿಯಾಗಿದೆ.

ಮಂಗಳವಾರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ವಸ್ತಾರೆ ಗ್ರಾಮದ ಜಂಕ್ಷನ್‍ನಲ್ಲಿ ಕಾರೊಂದನ್ನು ತಡೆದು ತಪಾಸಣೆ ನಡೆಸಿದ್ದು, ಈ ವೇಳೆ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 90 ಗ್ರಾಂ. ತೂಕದ 18 ಚಿನ್ನದ ಉಂಗುರಗಳು ಪತ್ತೆಯಾಗಿವೆ. ಕಾರಿನಲ್ಲಿ ಪತ್ತೆಯಾದ ಚಿನ್ನದ ಉಂಗುರಗಳಿಗೆ ಸಂಬಂಧಿಸಿ ಯಾವುದೇ ದಾಖಲೆಗಳು ಕಾರಿನ ಮಾಲಕರ ಬಳಿ ಇಲ್ಲದ ಕಾರಣಕ್ಕೆ ಅಧಿಕಾರಿಗಳ ತಂಡ ಚಿನ್ನದ ಉಂಗುರಗಳ ಸಹಿತ ಕಾರನ್ನೂ ಜಪ್ತಿ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಂಸಿಸಿ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ತಂಡ ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್‍ಪೋಸ್ಟ್ ಗಳನ್ನು ತೆರೆದು ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಸೋಮವಾರ ಕೊಪ್ಪ ತಾಲೂಕು ವ್ಯಾಪ್ತಿಯ ಚೆಕ್‍ಪೋಸ್ಟ್ ವೊಂದರಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 1.25ಲಕ್ಷ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿದ್ದರೇ, ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 95ಸಾವಿರ ರೂ. ನಗದನ್ನು ವಶಕ್ಕೆ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News