ಚಿಕ್ಕಮಗಳೂರು| ಸೆಂಟ್ರಲ್ ಬ್ಯಾಂಕ್ ಇಂಡಿಯಾ ಸಿಬ್ಬಂದಿಯಿಂದ ಕೋಟ್ಯಂತರ ರೂ. ವಂಚನೆ; ದೂರು ದಾಖಲು

Update: 2023-11-30 16:28 GMT

ಚಿಕ್ಕಮಗಳೂರು: ಗ್ರಾಹಕರ ಅಸಲಿ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಲಾಕರ್ ನಲ್ಲಿಟ್ಟು ಸಾಲ ಮಂಜೂರು ಮಾಡಿರುವುದೂ ಸೇರಿದಂತೆ ಗ್ರಾಹಕರ ಎಫ್.ಡಿ ಹಣ ದುರುಪಯೋಗ ಮಾಡಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿಕೊಂಡಿರುವ ಪ್ರಕರಣ ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿರುವುದು ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಭೋಳರಾಮೇಶ್ವರ ದೇವಾಲಯದ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೇಜರ್‌ ಗಳಾದ ಸಂದೀಪ್ ಕೊಲ್ಲೂರಿ, ಪ್ರಶಾಂತ್, ಸಿಬ್ಬಂದಿಯಾದ ನಾರಾಯಣ ಸ್ವಾಮಿ, ಲಾವಣ್ಯಾ, ಶ್ವೇತಾ ಎಂಬವರ ವಿರುದ್ಧ ಬೆಂಗಳೂರು ಬ್ಯಾಂಕಿನ ಮ್ಯಾನೇಜರ್ ವಂಚನೆ ಸಂಬಂಧ ನಗರದ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂದೀಪ್ ಹಾಗೂ ಸಿಬ್ಬಂದಿ ಗ್ರಾಹಕರು ನೀಡುತ್ತಿದ್ದ ಅಸಲಿ ಚಿನ್ನಕ್ಕೆ ಸಾಲ ಮಂಜೂರು ಮಾಡುತ್ತಿದ್ದರು. ನಂತರ ಗ್ರಾಹಕರು ನೀಡುತ್ತಿದ್ದ ಅಸಲಿ ಚಿನ್ನವನ್ನು ಮಾರಾಟ ಮಾಡಿ, ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನವನ್ನು ಲಾಕರ್‌ ನಲ್ಲಿಡುತ್ತಿದ್ದರು. ಅಲ್ಲದೆ ಗ್ರಾಹಕರ ಎಫ್.ಡಿ ಹಣವನ್ನೂ ಸ್ವಂತಕ್ಕೆ ಬಳಸಿಕೊಂಡಿದ್ದ ಆರೋಪಿಗಳ ಪೈಕಿ ಸಂದೀಪ್ ಹಾಗೂ ನಾರಾಯಣ ಸ್ವಾಮಿ ಅವರು ತಮ್ಮ ಪತ್ನಿಯಂದಿರ ಹೆಸರಿನಲ್ಲೂ ನಕಲಿ ಚಿನ್ನವನ್ನೇ ಅಡವಿಟ್ಟು 50 ಲಕ್ಷ ರೂ. ಸಾಲವನ್ನು ಬ್ಯಾಂಕ್ ನಿಂ ಮಂಜೂರು ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಲಾಕ‌ರ್ ನಲ್ಲಿರಿಸಿದ್ದ 141 ಪ್ಯಾಕೆಟ್ ಅಸಲಿ ಚಿನ್ನದ ಬದಲಿಗೆ ಈ ಆರೋಪಿಗಳು 140 ಪ್ಯಾಕೆಟ್ ನಕಲಿ ಚಿನ್ನವನ್ನು ಇಟ್ಟಿದ್ದರು. ಗ್ರಾಹಕರಿಗೆ ತಿಳಿಯದಂತೆ ಕೆಲವರ ಹೆಸರಿನಲ್ಲಿ ಸಾಲ ಮಾಡಿದ್ದ ಆರೋಪಿಗಳು, ಬ್ಯಾಂಕಿಗೆ ಕಟ್ಟಲೆಂದು ಗ್ರಾಹಕರು ಕೊಟ್ಟ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ವಂಚನೆ ಬೆಳಕಿಗೆ ಬರುತ್ತಿದ್ದಂತೆ ಮ್ಯಾನೇಜ್ ಸಂದೀಪ್ ಸೇರಿದಂತೆ ಐವರು ಸಿಬ್ಬಂದಿಯನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಹಕರ ಪರದಾಟ: ಬ್ಯಾಂಕಿನಲ್ಲಿ ನಡೆದಿರುವ ವಂಚನೆ ಪ್ರಕರಣದಿಂದಾಗಿ ಗ್ರಾಹಕರ ದಿನನಿತ್ಯದ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು ಸಕಾಲದಲ್ಲಿ ಸೇವೆಗಳು ಲಭ್ಯವಾಗುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News