ಚಿಕ್ಕಮಗಳೂರು| ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ನಾಲ್ವರು ವಶಕ್ಕೆ

Update: 2024-01-05 11:33 GMT

ಚಿಕ್ಕಮಗಳೂರು: ಊರೊಳಗೆ ಬಂದ ಎಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ತರೀಕೆರೆ ಪೊಲೀಸರು 15 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಶಿವರಾಮ್, ರಾಜಪ್ಪ, ಶಂಕರ್, ತಮ್ಮಯ್ಯ ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡ 11 ಜನರ ಬಂಧನಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗೇರು ಮರಡಿ ಗ್ರಾಮದ ಗೊಲ್ಲರಹಟ್ಟಿ ಬಡಾವಣೆಯ ಮೇಲ್ವರ್ಗದವರ ಬಡಾವಣೆಯಲ್ಲಿ ಜೆಸಿಬಿಯಲ್ಲಿ ಮನೆ ಕೆಡಗುವ ಕೆಲಸಕ್ಕೆಂದು ಮಾದಿಗ ಸಮುದಾಯದ ಜೆಸಿಬಿ ಚಾಲಕ ಮುರುಳಿ ಜೆಸಿಬಿಯೊಂದಿಗೆ ತೆರಳಿದ್ದ. ಈ ವೇಳೆ ಮೇಲ್ವರ್ಗದವರು ಯುವಕನ‌ ಜಾತಿ ಕೇಳಿ, ಆತ ಕೆಳ ಜಾತಿಯವನೆಂದು ತಿಳಿದ ಮೇಲೆ ಯುವಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕೆಳಜಾತಿಯವರು ನಮ್ಮ ಬಡಾವಣೆಗೆ ಬಂದಿದ್ದರಿಂದ ಬಡಾವಣೆ ಹಾಗೂ ದೇವಾಲಯಗಳು ಮೈಲಿಗೆಯಾಗಿವೆ ಎಂದು ಹೇಳಿ ಜಾತಿನಿಂದನೆ ಮಾಡಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ಅಲ್ಲದೇ ದಲಿತ ಯುವಕನ ಬಳಿ ಇದ್ದ ಹಣವನ್ನು ದಂಡದ ರೂಪದಲ್ಲಿ ಕಿತ್ತುಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಯುವಕ ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಹಲ್ಲೆ ಸಂಬಂಧ 15 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಹಲ್ಲೆ ಖಂಡಿಸಿ ದಲಿತ ಸಂಘಟನೆಗಳು ಗೊಲ್ಲರಹಟ್ಟಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News