ಚಿಕ್ಕಮಗಳೂರು| ಮುದ್ದೆ ಊಟ ಮಾಡಿ ಅಸ್ವಸ್ಥರಾಗಿದ್ದ ತಂದೆ ಮಗಳು ಮೃತ್ಯು: ಓರ್ವನ ಸ್ಥಿತಿ ಗಂಭೀರ
ಚಿಕ್ಕಮಗಳೂರು: ಮನೆಯಲ್ಲಿ ಮಾಡಿದ್ದ ರಾಗಿ ಮುದ್ದೆ ಸೇವಿಸಿ ಅಸ್ವಸ್ಥರಾಗಿದ್ದ ಒಂದೇ ಕುಟುಂಬದ ಮೂವರ ಪೈಕಿ ತಂದೆ ಹಾಗೂ ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ವರದಿಯಾಗಿದೆ.
ದೊಡ್ಡಪಟ್ಟಣಗೆರೆ ಗ್ರಾಮದ ದೊಡ್ಡಯಲ್ಲಪ್ಪ(75) ಹಾಗೂ ಆತನ ಮಗಳು ಯಲ್ಲಮ್ಮ(50) ಮೃತಪಟ್ಟ ಮೃತರು ಎಂದು ಗುರುತಿಸಲಾಗಿದ್ದು, ದೊಡ್ಡಯಲ್ಲಪ್ಪನ ಸಹೋದರ ಸಣ್ಣಯಲ್ಲಮ್ಮ ಮಂಗಳವಾರ ರಾತ್ರಿ ವಿಪರೀತ ಮದ್ಯ ಸೇವಿಸಿದ್ದಾರೆ. ನಂತರ ಯಲ್ಲಮ್ಮ ತಯಾರಿಸಿದ ರಾಗಿ ಮುದ್ದೆಯ ಊಟವನ್ನು ಎಲ್ಲರೂ ಜೊತೆಗೂಡಿ ಊಟ ಮಾಡಿದ್ದಾರೆ ಎನ್ನಲಾಗಿದೆ.
ಊಟದ ಬಳಿಕ ರಾಗಿ ಮುದ್ದೆ ಸೇವಿದ್ದ ಮೂವರು ಹೊಟ್ಟೆ ನೋವಿನಿಂದ ನರಳಾಡಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಕುಟುಂಬಸ್ಥರು ಮೂವರನ್ನು ಕಡೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೊಡ್ಡಯಲ್ಲಪ್ಪ ಮತ್ತು ಆತನ ಮಗಳು ಯಲ್ಲಮ್ಮ ಮಧ್ಯರಾತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ದೊಡ್ಡಯಲ್ಲಪ್ಪನ ಸಹೋದರನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುದ್ದೆ ಊಟ ಮಾಡಿ ಸಾವನ್ನಪಿರುವ ಬಗ್ಗೆ ಹಲವು ಅನುಮಾನದ ಶಂಕೆ ವ್ಯಕ್ತವಾಗಿದ್ದು, ಮೃತರ ಮನೆಯಲ್ಲಿ ಉಳಿದ ಮುದ್ದೆಯನ್ನು ಕೋಳಿ ಮರಿಗಳು ಕೂಡ ಸೇವಿಸಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಫ್‍ಎಸ್‍ಐಎಲ್ ವರದಿ ಬಂದ ಬಳಿಕ ಮೃತರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಕಡೂರು ಪೊಲೀಸ್ ಠಾಣೆಯ ಪಿಎಸ್ಸೈ ಧನಂಜಯ್ ತಿಳಿಸಿದ್ದಾರೆ.