ಚಿಕ್ಕಮಗಳೂರು | ಕಾಡಾನೆ ದಾಳಿಗೆ ಟಿಂಬರ್ ಕಾರ್ಮಿಕ ಮೃತ್ಯು
ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಕಾರ್ಮಿಕರೊಬ್ಬರು ಮೃತಟಪಟ್ಟ ಘಟನೆ ತರೀಕೆರೆ ತಾಲೂಕಿನ ತಣಿಗೆಬೈಲು ಗ್ರಾಮ ಸಮೀಪದ ವರ್ತೆಗುಂಡಿ ಎಂಬಲ್ಲಿ ಸೋಮವಾರ ವರದಿಯಾಗಿದೆ.
ಟಿಂಬರ್ ಕೆಲಸ ಮಾಡುತ್ತಿದ್ದ ಅಕ್ಬರ್(35) ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಣಿಗೆಬೈಲು ಅರಣ್ಯ ಪ್ರದೇಶ ವ್ಯಾಪ್ತಿಯ ವರ್ತೆಗುಂಡಿ ಗ್ರಾಮದ ಕಾಫಿ ತೋಟವೊಂದಕ್ಕೆ ಸೋಮವಾರ ಕಾಡಾನೆ ಬಂದಿದ್ದು, ಈ ವೇಳೆ ತೋಟದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಅಕ್ಬರ್ ಇತರ ಕಾರ್ಮಿಕರೊಂದಿಗೆ ಸೇರಿಕೊಂಡು ಕಾಡಾನೆಯನ್ನು ಓಡಿಸಲು ಮುಂದಾಗಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಕಾಡಾನೆ ಅಕ್ಬರ್‌ನನ್ನು ಅಟ್ಟಿಸಿಕೊಂಡು ಬಂದಿದೆ. ಆನೆಯಿಂದ ಪಾರಗಲು ಅಕ್ಬರ್ ಓಡುತ್ತಿದ್ದ ವೇಳೆ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಕಾಡಾನೆ ಆತನ ಮೇಲೆ ದಾಳಿ ಮಾಡಿ ದಂತದಿಂದ ತಿವಿದು ಕೊಂದು ಹಾಕಿದೆ. ಆನೆ ತಿವಿದ ರಭಸಕ್ಕೆ ಕಾಡಾನೆಯ ದಂತವೊಂದು ತುಂಡಾಗಿ ನೆಲಕ್ಕೆ ಹೂತು ಕೊಂಡಿದೆ ಎಂದು ತಿಳಿದು ಬಂದಿದೆ.
ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ
ಕಾಡಾನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯ ಗ್ರಾಮಸ್ಥರು, ರೈತರು ಅರಣ್ಯ ಇಲಾಖೆ ವಿರುದ್ಶ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಧರಣಿ ನಡೆಸಿ, ಕಾಡಾನೆಗಳ ಹಾವಳಿಗೆ ರೈತರು, ಕಾರ್ಮಿಕರು ಪ್ರತಿದಿನ ಸಾಯುತ್ತಿದ್ದರೂ ಅರಣ್ಯ ಇಲಾಖೆ ಕಾಡಾನೆಗಳ ಸ್ಥಳಾಂತರಕ್ಕೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಅಲ್ಲದೆ, ಮೃತನ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡಾನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು, ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
3 ದಿನಗಳ ಅಂತರದಲ್ಲಿ ಇಬ್ಬರು ಬಲಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಇಬ್ಬರು ಕಾರ್ಮಿಕರು ಕಾಡಾನೆಗೆ ಬಲಿಯಾಗಿದ್ದು, ಮಾ.23ರಂದು ಚಿಕ್ಕಮಗಳೂರು ಸಮೀಪದ ಕುಂಚೇನಹಳ್ಳಿ ಎಂಬಲ್ಲಿ ತೋಟ ಕಾರ್ಮಿಕರೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಸೋಮವಾರ ಟಿಂಬರ್ ಕಾರ್ಮಿಕನೊಬ್ಬ ಕಾಡಾನೆಗೆ ಬಲಿಯಾಗಿದ್ದಾರೆ.