ಚಿಕ್ಕಮಗಳೂರಿನಲ್ಲಿ ಮುಂದುವರಿದ ಹಿಂಗಾರು ಮಳೆ : ಜನಜೀವನ ಅಸ್ತವ್ಯಸ್ತ, ಮತ್ತೋಡಿ-ಮಲ್ಲಂದೂರು ಸಂಪರ್ಕ ಕಡಿತ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಬುಧವಾರ ಮಧ್ಯಾಹ್ನದ ಬಳಿಕ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದರೇ, ಬಯಲುಸೀಮೆಯ ಬಹುತೇಕ ಭಾಗದಲ್ಲಿ ದಟ್ಟ ಮೋಡಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ.
ಹವಮಾನ ವೈಪರೀತ್ಯದಿಂದ ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಬೆಳೆಗಳು ಮಣ್ಣುಪಾಲಾಗುತ್ತಿದ್ದು, ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಬುಧವಾರವೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನ ಮುತ್ತೋಡಿ, ಮಲ್ಲಂದೂರು ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಈ ಭಾಗದಲ್ಲಿ ಒಂದು ಗಂಟೆ ಅವಧಿಯಲ್ಲಿ ನಾಲ್ಕು ಇಂಚು ಮಳೆಯಾಗಿದೆ.
ಭಾರೀ ಮಳೆಯಿಂದ ಗಿರಿಶ್ರೇಣಿಯ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದು, ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಒಂದು ಅಡಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗಿತ್ತು. ಭಾರೀ ಮಳೆಯ ಪರಿಣಾಮ ರಸ್ತೆ ಬದಿ ಧರೆಕುಸಿದಿದ್ದು, ಮುತ್ತೋಡಿ-ಮಲ್ಲಂದೂರು ಮಾರ್ಗ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ಗುಡ್ಡದಿಂದ ಕಲ್ಲುಗಳು ರಸ್ತೆಗೆ ಉರುಳಿ ಬಿದ್ದಿವೆ. ಏಕಾಏಕಿ ಸುರಿದ ಮಳೆಗೆ ಮಲ್ಲಂದೂರು, ಮುತ್ತೋಡಿ, ಗಾಳಿಗುಡ್ಡ, ಮೇಲಿನ ಹುಲವತ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಕಂಗಲಾಗಿದ್ದಾರೆ.
ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಾಟಿ, ಬಣಕಲ್ ಭಾಗದಲ್ಲಿ ಮಳೆಯಾಗಿದೆ. ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು ಸುತ್ತಮುತ್ತ ಮಳೆಯಾಗಿದೆ. ಶೃಂಗೇರಿ ತಾಲೂಕಿನಲ್ಲಿ ಸಂಜೆ ವೇಳೆಗೆ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ನಗರದ ಸುತ್ತಮುತ್ತ ಸಂಜೆ ದಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ದಟ್ಟ ಮೋಡ ಕವಿದ ವಾತಾವರಣ ವಿದ್ದು ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀರೂರು ಸುತ್ತಮುತ್ತ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಹಿಂಗಾರು ಮಳೆ ಅರ್ಭಟಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು, ಭತ್ತ ಸೇರಿದಂತೆ ತರಕಾರಿ ಬೆಳೆಗಳು ನೀರುಪಾಲಾಗಿದ್ದು, ರೈತರಿಗೆ ಅಪಾರ ನಷ್ಟವಾಗಿದೆ.