ಚಿಕ್ಕಮಗಳೂರು-ಕಡೂರು ಹೆದ್ದಾರಿ ಅಗಲೀಕರಣ ವೇಳೆ ಅಧಿಕಾರಿಗಳಿಂದ ತಾರತಮ್ಯ; ಆರೋಪ
ಚಿಕ್ಕಮಗಳೂರು: ನಗರ ಸಮೀಪದಲ್ಲಿರುವ ಲಕ್ಯಾ ಕ್ರಾಸ್‍ನಿಂದ ಲಕ್ಯಾ ಗ್ರಾಮದವರೆಗೆ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ಬಲಾಢ್ಯರ ಜಮೀನು ಬಿಟ್ಟು, ಬಡ ರೈತರ ಜಮೀನುಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಗುರುವಾರ ದಿಢೀರ್ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ತಹಶೀಲ್ದಾರ್ ಜೊತೆಗೆ ಪೊಲೀಸರು ಮತ್ತು ಇಂಜಿನಿಯರುಗಳು, ಗುತ್ತಿಗೆದಾರರು ಗುರುವಾರ ಬೆಳಗ್ಗೆ ರಸ್ತೆ ವಿಸ್ತರಣೆಗೆ ಜಾಗ ಗುರುತು ಮಾಡಲು ಮುಂದಾದಾಗ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡ ರೈತರು, ಬಲಾಢ್ಯರು ಮತ್ತು ಸಣ್ಣ ರೈತರ ನಡುವೆ ಆಗುತ್ತಿರುವ ತಾರತಮ್ಯ ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ಕೈಬಿಟ್ಟ ಅಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.
ಈ ವೇಳೆ ರೈತ ಎಚ್.ಸಿ.ಸುರೇಂದ್ರ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ. ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ 120 ಅಡಿ ಜಾಗವನ್ನು ಪಡೆದುಕೊಳ್ಳಲು ಎಲ್ಲಾ ರೈತರು ಒಪ್ಪಿದ್ದಾರೆ. ಪ್ರತಿಯೊಬ್ಬರಿಗೂ ಪರಿಹಾರದ ಮೊತ್ತವನ್ನು ಪ್ರಕಟಿಸಲಾಗಿದೆ. ಆದರೆ ತೆಂಗಿನ ಮರಗಳು, ಬೇವು, ಮಾವಿನ ಮರಗಳು ತಂತಿ ಬೇಲಿ, ಅಡಿಕೆ ಗಿಡಗಳಿಗೆ ಮೌಲ್ಯ ನಿಗಧಿಪಡಿಸಿದ್ದರೂ ಸಾಗುವಾನಿ ಗಿಡಗಳಿಗೆ ಪರಿಹಾರವನ್ನೇ ನೀಡುತ್ತಿಲ್ಲ. ಹಳೇ ಲಕ್ಯಾ ಸರ್ವೇ ನಂಬರ್‍ನಲ್ಲಿ ಪ್ರತೀ ಎಕರೆಗೆ 11.40 ಲಕ್ಷ ರೂ. ನಿಗಧಿ ಮಾಡಲಾಗಿದೆ. ಆದರೆ ಇದೇ ಬೇಲಿ ಪಕ್ಕದಲ್ಲಿ ಇನ್ನೊಂದು ಜಮೀನಿಗೆ 44 ಲಕ್ಷ ರೂ. ನಿಗಧಿ ಮಾಡಲಾಗಿದೆ. ಈ ತಾರತಮ್ಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಲೋಕೇಶ್ ಎಂಬವರು ಮಾತನಾಡಿ, ಬುಧವಾರ ಸರ್ವೇ ಮಾಡಿದ್ದಾರೆ. ತಾರತಮ್ಯ ಮಾಡಿರುವುದರಿಂದ ಈ ಸರ್ವೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಕ್ಕೆ ಗುರುವಾರ ಬೆಳಗ್ಗೆ ಬಲವಂತವಾಗಿ ತಂತಿ ಬೇಲಿಗಳನ್ನು ನಾಶ ಮಾಡಲಾಗಿದೆ. ಹತ್ತು ಗುಂಟೆಗಿಂತಲೂ ಹೆಚ್ಚು ಬಿಡಬೇಕು ಎಂದು ಪೊಲೀಸರ ಮೂಲಕ ಒತ್ತಡ ಹಾಕುತ್ತಿದ್ದಾರೆ. ಬಲಾಢ್ಯರ ಜಮೀನು ರಕ್ಷಿಸುವ ಸಲುವಾಗಿ ಹಳೇ ರಸ್ತೆಯನ್ನು ಬಿಟ್ಟು ನಮ್ಮ ಜಮೀನಿನ ಮೇಲೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸ್ತವಾಂಶ ಪರಿಶೀಲಿಸಿ ನ್ಯಾಯ ದೊರಕಿಸಬೇಕು ಎಂದು ಹೇಳಿದರು.
ವೆಂಕಟೇಶ್ ಮಾತನಾಡಿ, ಬಡವರನ್ನು ತುಳಿದು ಬಲಾಢ್ಯರ ಪರವಾಗಿ ಅಧಿಕಾರಿಗಳು ನಿಂತಿದ್ದಾರೆ. ದಬ್ಬಾಳಿಕೆ ಮಾಡಿ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ದಾಂಧಲೆಗೆ ಮುಂದಾಗಿದ್ದಾರೆ. ಜಾಗವನ್ನು ಮೂರ್ನಾಲ್ಕು ಬಾರಿ ಅಳತೆ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ಜಾಗವನ್ನು ಗುರುತು ಮಾಡಿದ್ದಾರೆ. ಮೇಲಾಧಿಕಾರಿಗಳೇ ಬಂದು ನ್ಯಾಯ ಒದಗಿಸಬೇಕು. ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ 120 ಅಡಿ ಬಳಸಿಕೊಳ್ಳಲು ನಮ್ಮದೂ ಒಪ್ಪಿಗೆ ಇದೆ. ಆದರೆ ಸಂಬಂಧ ಪಟ್ಟ ಇಂಜಿನೀಯರ್ ಮತ್ತು ಕಂಟ್ರಾಕ್ಟರ್‍ಗಳು ಬಂದು ಮನಸೋಇಚ್ಛೆ ಜಾಗ ಅಳೆಯಲು ಮುಂದಾಗಿರುವುದು ಸರಿಯಲ್ಲ ಎಂದರು.
ಹಿಂದೆ ರಸ್ತೆ ಅಗಲೀಕರಣಕ್ಕೆ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದ ಹಿನ್ನೆಲೆಯಲ್ಲಿ ವಾಪಾಸಾಗಿದ್ದ ಅಧಿಕಾರಿಗಳು, ಗುರುವಾರ ಬೆಳಗ್ಗೆ ಪೊಲೀಸರು ಮತ್ತು ತಹಶೀಲ್ದಾರ್ ಜತೆ ಬಂದು ಜಮೀನು ಖುಲ್ಲಾ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ರೈತರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ತಹಶೀಲ್ದಾರ್ ಗೆ ಮನವರಿಕೆ ಮಾಡಿದ್ದೇವೆ. ನಮಗಿರುವುದೇ 10ರಿಂದ 20 ಗುಂಟೆ ಜಮೀನು, ಅದರಲ್ಲಿ ಅರ್ಧಕ್ಕೂ ಹೆಚ್ಚು ಜಮೀನು ರಸ್ತೆಗೆ ಹೋದರೆ ನಮ್ಮ ಪರಿಸ್ಥಿತಿ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ರಸ್ತೆಗೆ ಜಾಗ ಬಿಡುವುದಿಲ್ಲ ಎಂದು ನಾವು ಹೇಳಿಲ್ಲ, ಹಳೇ ರಸ್ತೆಯ ಮಧ್ಯದಿಂದ ಎರಡೂ ಬದಿಗೆ ಸಮನಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಿ ಎನ್ನುವುದು ನಮ್ಮ ಒತ್ತಾಯ ಎಂದರು.
ಈ ಸಂದರ್ಭದಲ್ಲಿ ರೈತರಾದ ಲೋಕೇಶ್, ಕುಮಾರ್, ತೀರ್ಥೇಗೌಡ, ಭದ್ರೇಗೌಡ, ಚಂದ್ರೇಗೌಡ, ಸಿದ್ಧೇಶ್ ಉಪಸ್ಥಿತರಿದ್ದರು.